ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸರು ಚಿತ್ರವಿಚಿತ್ರ ನಿಯಮ ಹೇರಿದ್ದಾರೆ ಎಂದು ಆರೋಪ
ಮಂಗಳೂರು: ರಾಜ್ಯ ಸರಕಾರ ವಿಘ್ನ ವಿನಾಯಕನಿಗೆ ಈಗ ವಿಘ್ನ ತಂದಿರಿಸಿದೆ. ಗಣೇಶ ವಿಗ್ರಹ ಪ್ರತಿಷ್ಠಾಪನೆಗೆ ಅನುಮತಿ ಕೋರಿದರೆ ಚಿತ್ರವಿಚಿತ್ರ ನಿಯಮ ಹೇರಲಾಗುತ್ತಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಗಣ್ಯರ, ಅತಿಥಿಗಳ ಹೆಸರು, ಮೊಬೈಲ್ ಸಂಖ್ಯೆ ನೀಡಲು ಹೇಳಲಾಗುತ್ತಿದೆ. ಅವರ ವಿಳಾಸ ನೀಡಬೇಕು, ಭಾಗವಹಿಸುವ ಟ್ಯಾಬ್ಲೊಗಳ ತಂಡ ಯಾವುದು ಎಂದು ಸೂಚಿಸಬೇಕು. ಯಾವ ವಾಹನದಲ್ಲಿ ಬರುತ್ತಾರೆ, ಅದರ ದಾಖಲೆ ನೀಡಬೇಕು, ಲೈಸೆನ್ಸ್ ನೀಡಬೇಕು ಎಂದು ಅರ್ಥವಿಲ್ಲದ ಸೂಚನೆಗಳನ್ನು ಸರ್ಕಾರ ನೀಡುತ್ತಿದೆ ಎಂದು ಮಂಗಳೂರು ಶಾಸಕ ವೇದವ್ಯಾಸ ಕಾಮತ್ ಆಕ್ರೋಶ ವ್ಯಕ್ತಪಡಿಸಿಹಾಕಿದ್ದಾರೆ.
ಕಾಂಗ್ರೆಸ್ಸಿಗರಿಗೆ ಗಣೇಶನ ಮೇಲೆ, ಹಿಂದೂ ಹಬ್ಬಗಳ ಮೇಲೆ ಯಾಕಿಷ್ಟು ಕೋಪ? ಮಂಗಳೂರಿನಲ್ಲಿ ಸಾರ್ವಜನಿಕ ಗಣೇಶೋತ್ಸವ ಹಲವು ವರ್ಷಗಳಿಂದ ಆಚರಿಸಲಾಗುತ್ತಿದೆ. ಈ ಹಿಂದೆ ಇಲ್ಲದಂತಹ ಹೊಸ ನಿಯಮವನ್ನು ಮಾಡಿದ್ದಾರೆ. ಆಮಂತ್ರಣ ಪತ್ರಿಕೆಯಲ್ಲಿರುವ ಆಹ್ವಾನಿತರ ಹೆಸರು ಮತ್ತು ಫೋನ್ ನಂಬರ್ ಕೊಡಬೇಕಂತೆ. ಅತಿಥಿಗಳ ನಂಬರ್, ಹೆಸರು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ಅವಶ್ಯಕತೆ ಇಲ್ಲ. ಏನೇ ಹೆಚ್ಚುಕಮ್ಮಿ ಆದರೂ ಗಣೇಶೋತ್ಸವ ಸಮಿತಿ ಇರುತ್ತೆ. ಸಮಿತಿಯವರನ್ನು ಪ್ರಶ್ನೆ ಮಾಡಬಹುದು. ಶೋಭಯಾತ್ರೆಯಲ್ಲಿ ಸಾಗುವ ಟ್ಯಾಬ್ಲೋ ಯಾವುದು? ವಾಹನದ ಮಾಲೀಕ ಯಾರು? ದಾಖಲೆ, ವಾಹನ ದಾಖಲೆ, ಚಾಲಕನ ದಾಖಲೆ ಬೇಕಂತೆ. ಈ ದಾಖಲೆ ಹಿಡಿದುಕೊಂಡು ಮುಂಚಿತವಾಗಿ ಪೊಲೀಸ್ ಇಲಾಖೆಗೆ ಕೊಡಬೇಕಂತೆ. ಯಾವ ಯಾವ ಟ್ಯಾಬ್ಲೋ ಬರುತ್ತೆ ಎಂದು ಮೊದಲೇ ಗೊತ್ತಾಗಲ್ಲ. ಇಲ್ಲಿವರೆಗೂ ಇದನ್ನೆಲ್ಲಾ ಕೇಳಿರಲಿಲ್ಲ. ಆದ್ರೆ ಈ ವರ್ಷ ಯಾಕೆ ಕೇಳ್ತಿದ್ದಾರೆ? ಎಂದು ಕಿಡಿಕಾರಿದ್ದಾರೆ.
ಸಮಿತಿಯವರು ಹತ್ತಾರು ಬಾರಿ ಪೊಲೀಸ್ ಸ್ಟೇಷನ್‌ಗೆ ಅಲೆಯುತ್ತಿದ್ದಾರೆ. ಈ ಹೊಸ ನಿಯಮಗಳನ್ನು ಬಿಜೆಪಿ ಖಂಡಿಸುತ್ತದೆ. ಹಿಂದೂ ಸಮಾಜದ ಧಾರ್ಮಿಕ ಆಚರಣೆಗೆ ತೊಂದರೆ ಕೊಡುವುದು ಕಾಂಗ್ರೆಸ್‌ನ ಡಿಎನ್ಎನಲ್ಲಿದೆ. ನಮ್ಮ ಸರ್ಕಾರ ಇದ್ದಾಗ ಈ ರೀತಿಯ ತೊಂದರೆ ಆಗಿರಲಿಲ್ಲ. ಸಾರ್ವಜನಿಕ ಗಣೇಶೋತ್ಸವ ಆಚರಣೆ ಕಡಿಮೆ ಆಗಬೇಕು. ಹಿಂದೂ ಆಚರಣೆಗಳಿಗೆ ತೊಂದರೆ ಕೊಡಬೇಕೆಂದು ಕಾಂಗ್ರೆಸ್ ಈ ರೀತಿ ಮಾಡುತ್ತಿದೆ. ಕಮೀಷನರೇಟ್ ಹಾಗೂ ಜಿಲ್ಲೆಯಲ್ಲಿ ಸುಮಾರು 400ಕ್ಕೂ ಹೆಚ್ಚು ಸಾರ್ವಜನಿಕ ಗಣೇಶೋತ್ಸವ ನಡೆಯುತ್ತೆ. ಈ ನಿಯಮಗಳನ್ನು ಯಾರೂ ಪಾಲಿಸಬೇಡಿ. ಸರ್ಕಾರ ಏನು ಬೇಕಾದರೂ ಹೇಳಲಿ. ನೂರು ಬಾರಿ ಓಡಾಡಿ ಕಷ್ಟ ಅನುಭವಿಸಬೇಕೆಂದು ದಾಖಲೆ ಸಂಗ್ರಹಿಸುತ್ತಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಈ ನಿಯಮ ಮಾಡಿದೆ. ಸಡಿಲಿಕೆ ಮಾಡದೆ ಇದ್ದರೆ ಕಳೆದ ವರ್ಷದಂತೆ ಮಾಡಿ. ಯಾವುದೇ ಇಲಾಖೆಯವರು ಬಂದರೂ ನಾವು ನಿಮ್ಮ ಜೊತೆ ಇದ್ದೇವೆ ಎಂದು ಹೇಳಿದ್ದಾರೆ.