ಬೆಂಗಳೂರು : ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಬಿಜೆಪಿಗೆ ಮತ ಕೇಳಿರುವ ಘಟನೆ ವಿಜಯಪುರದ ಪ್ರಜಾಧ್ವನಿ ಯಾತ್ರೆಯಲ್ಲಿ ನಡೆದಿದೆ. ವಿಜಯಪುರದ ಇಂಡಿ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮದಲ್ಲಿ ನಮ್ಮ ಮೇಲೆ ನಂಬಿಕೆಯಿದ್ದರೆ ಬಿಜೆಪಿಗೆ ಮತ ಹಾಕಿ, ಬಿಜೆಪಿಗೆ ಮತ ಹಾಕಿಸಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಈ ವೀಡಿಯೊ ತುಣುಕು ನಿನ್ನೆಯಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದ್ದು, ವಿರೋಧಿಗಳ ಬಾಯಿಯಿಂದ ಕೆಲವೊಮ್ಮೆ ತಪ್ಪಿಯಾದರೂ ಸತ್ಯ ಹೊರಬರುತ್ತದೆ ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ.
ನಾವು ಉಚಿತವಾಗಿ ಅಕ್ಕಿ ನೀಡುತ್ತೇವೆ. ಉಚಿತವಾಗಿ 10 ಕೆಜಿ ಅಕ್ಕಿ ಪಡೆಯಬೇಕಿದ್ದರೆ… ನಮ್ಮ ಮೇಲೆ ನಂಬಿಕೆ ಇದೆ ಅಲ್ವಾ…? ನಮ್ಮ ಮೇಲೆ ವಿಶ್ವಾಸ ಇದೆ ಅಲ್ವಾ…? ಹಾಗಿದ್ರೆ ಎಲ್ಲ ಬಿಜೆಪಿಗೆ ಓಟು ಹಾಕಿ, ಎಲ್ಲರ ಹತ್ರ ಬಿಜೆಪಿಗೆ ಓಟು ಹಾಕಿಸಿ ಎಂದು ಸಿದ್ದರಾಮಯ್ಯ ತಾರಕ ಸ್ವರದಲ್ಲಿ ಹೇಳಿದ್ದಾರೆ.
ಕೂಡಲೇ ತನ್ನ ತಪ್ಪಿನ ಅರಿವಾಗಿ ಅಲ್ಲಲ್ಲ ಕಾಂಗ್ರೆಸ್‌ಗೆ ಓಟು ಹಾಕಿ , ಹಾಕಿಸಿ ಎಂದು ತಿದ್ದಿಕೊಂಡಿದ್ದಾರೆ. ಆದರೆ ಟ್ರೋಲ್ ಮಾಡುವವರು ಬಿಜೆಪಿಗೆ ಓಟು ಹಾಕಿ ಎಂದಿರುವ ಭಾಗವನ್ನಷ್ಟೇ ಹರಿಯಬಿಟ್ಟು ಸಿದ್ದರಾಮಯ್ಯ ಮತ್ತು ಕಾಂಗ್ರೆಸಿಗರ ಕಾಲೆಳೆದಿದ್ದಾರೆ.