ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಮತ್ತೊಂದು ಭೂ ಹಗರಣ ಸುತ್ತಿಕೊಂಡಿದೆ. ಖರ್ಗೆ ಕುಟುಂಬದ ವಿರುದ್ಧ ಮತ್ತೊಂದ ಗಂಭೀರ ಆರೋಪ ಕೇಳಿಬಂದಿದ್ದು, ಖರ್ಗೆ ಕುಟುಂಬದ ಸಿದ್ಧಾರ್ಥ ವಿಹಾರ ಟ್ರಸ್ಟ್ ನಡೆಸುತ್ತಿರುವ ಸಂಸ್ಥೆಗೆ 19 ಎಕರೆ ಸರ್ಕಾರಿ ಭೂಮಿಯನ್ನು ಉಚಿತವಾಗಿ ನೀಡಲಾಗಿದೆ ಎಂದು ಬಿಜೆಪಿ ಸಂಸದ ಲೆಹರ್ ಸಿಂಗ್ ಸಿರೋಯಾ ಗಂಭೀರ ಆರೋಪ ಮಾಡಿದ್ದಾರೆ.
ಸಿದ್ಧಾರ್ಥ ವಿಹಾರ ಟ್ರಸ್ಟ್ ನಡೆಸುತ್ತಿರುವ ಕಲಬುರಗಿಯ ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್‌ಗೆ 19 ಎಕರೆ ಸರ್ಕಾರಿ ಭೂಮಿಯನ್ನು ಉಚಿತವಾಗಿ ನೀಡಲಾಗಿದೆ ಎಂದು ದಾಖಲೆಗಳು ಬಹಿರಂಗಪಡಿಸುತ್ತಿವೆ. ಈ ಕುರಿತು ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸಬೇಕು ಎಂದು ಬಿಜೆಪಿ ರಾಜ್ಯಸಭಾ ಸದಸ್ಯರಾಗಿರುವ ಲೆಹರ್ ಸಿಂಗ್ ಸಿರೋಯಾ ಒತ್ತಾಯಿಸಿದ್ದಾರೆ.
ಈ ಸಂಸ್ಥೆಯ ಟ್ರಸ್ಟಿಗಳಲ್ಲಿ ಖರ್ಗೆ ಅವರ ಪತ್ನಿ, ಅಳಿಯ ಮತ್ತು ಇಬ್ಬರು ಪುತ್ರರು ಇದ್ದಾರೆ. ಖರ್ಗೆ ಅವರ ಅಳಿಯ ಹಾಗೂ ಹಾಲಿ ಸಂಸದ ರಾಧಾಕೃಷ್ಣ ದೊಡ್ಡಮನಿ ಅವರು ಪಾಲಿ ಸಂಸ್ಥೆಯ ಕಾರ್ಯದರ್ಶಿಯಾಗಿದ್ದಾರೆ ಎಂದು ಸಿರೋಯಾ ಬಹಿರಂಗಪಡಿಸಿದ್ದಾರೆ.
2014ರ ಮಾರ್ಚ್‌ನಲ್ಲಿ ಅಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 16 ಎಕರೆ ಸರ್ಕಾರಿ ಭೂಮಿಯನ್ನು 30 ವರ್ಷಗಳ ಅವಧಿಗೆ ಪಾಲಿ ಇನ್‌ಸ್ಟಿಟ್ಯೂಟ್‌ಗೆ ಲೀಸ್ ಮೇಲೆ ನೀಡಿತ್ತು. ನಂತರ ಒಂದೆರಡು ವರ್ಷಗಳಲ್ಲಿ 16 ಎಕರೆ ಲೀಸ್ ಆಸ್ತಿಗೆ 3 ಎಕರೆ ಹೆಚ್ಚುವರಿ ಜಮೀನು ಸೇರ್ಪಡೆಯಾಯಿತು ಮತ್ತು ಅಂತಿಮವಾಗಿ ಮಾರ್ಚ್ 2017ರಲ್ಲಿ ಎಲ್ಲಾ 19 ಎಕರೆಯನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಖರ್ಗೆ ಕುಟುಂಬ ನಡೆಸುವ ಸಂಸ್ಥೆಗೆ ಉಚಿತವಾಗಿ ವರ್ಗಾಯಿಸಿತು. ಖರ್ಗೆಯವರ ಮಗ ಪ್ರಿಯಾಂಕ್ ಖರ್ಗೆ ಅವರು ಭೂಮಿ ಮಂಜೂರು ಮಾಡಿದಾಗ ಈಗಿನಂತೆ ಆಗಿನ ರಾಜ್ಯ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದರು ಎಂದು ಆರೋಪಿಸಿದ್ದಾರೆ.
5 ಎಕರೆ ಕೆಐಎಡಿಬಿ ಭೂ ಮಂಜೂರಾತಿಯಂತೆ 19 ಎಕರೆ ಭೂಮಿ ಹಸ್ತಾಂತರವನ್ನು ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸಬೇಕು ಎಂದು ನಾನು ಒತ್ತಾಯಿಸುತ್ತೇನೆ. ಕರ್ನಾಟಕದಲ್ಲಿ ಖರ್ಗೆ ಕುಟುಂಬದ ಅಧಿಕಾರ ದುರುಪಯೋಗ ಮತ್ತು ಸ್ವಜನ ಪಕ್ಷಪಾತವನ್ನು ಎತ್ತಿ ತೋರಿಸಿದ್ದಕ್ಕಾಗಿ ನನ್ನನ್ನು ವೈಯಕ್ತಿಕವಾಗಿ ಗುರಿಮಾಡಿ ನಿಂದಿಸಲಾಗಿದೆ. ಖರ್ಗೆ ಕುಟುಂಬ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಭಗವಾನ್ ಗೌತಮಬುದ್ಧರ ತತ್ವಗಳಲ್ಲಿ ನಂಬಿಕೆ ಹೊಂದಿದ್ದರೆ ಸ್ವತಹ ತನಿಖೆಗೆ ಒಳಗಾಗಬೇಕು ಎಂದು ಆಗ್ರಹಿಸಿದರು.
ಖಾಸಗಿ ಟ್ರಸ್ಟ್‌ಗೆ ಭೂಮಿಯನ್ನು ಮಂಜೂರು ಮಾಡಲು ಸಿದ್ದರಾಮಯ್ಯ ಸರ್ಕಾರ ಖರ್ಗೆಯವರ ಒತ್ತಡಕ್ಕೆ ಮಣಿದಿದೆಯೇ ಅಥವಾ ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಖರ್ಗೆ ಅವರನ್ನು ಮೆಚ್ಚಿಸಲು ಪ್ರಯತ್ನಿಸುತ್ತಿದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.