ಪುತ್ತೂರು: ಕೆಮ್ಮಾಯಿ ಶ್ರೀ ವಿಷ್ಣು ಯುವಕ ಮಂಡಲ ಹಾಗೂ ಮೊಸರು ಕುಡಿಕೆ ಉತ್ಸವ ಸಮಿತಿ ಜಂಟಿ ಆಶ್ರಯದಲ್ಲಿ 7ನೇ ವರ್ಷದ ಮೊಸರು ಕುಡಿಕೆ ಉತ್ಸವ ಸೆ.1 ಭಾನುವಾರ ಕೆಮ್ಮಾಯಿ ಓಂ ಅಶ್ವತ್ಥಕಟ್ಟೆ ಬಳಿ ಧಾರ್ಮಿಕ, ಆಟೋಟ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವೈಭವದ ಶೋಭಾಯಾತ್ರೆಗಳೊಂದಿಗೆ ನಡೆಯಲಿದೆ ಎಂದು ಶ್ರೀ ವಿಷ್ಣು ಯುವಕ ಮಂಡಲದ ಗೌರವಾಧ್ಯಕ್ಷ ಸುಂದರ ಪೂಜಾರಿ ಬಡಾವು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಾರ್ಯಕ್ರಮದಲ್ಲಿ ಮಕ್ಕಳು, ಮಹಿಳೆಯರು, ಪುರುಷರಿಗೆ ಮುದ್ದುಕೃಷ್ಣ ಸ್ಪರ್ಧೆ, ಭಕ್ತಿಗೀತೆ, ಗೋಣಿಚೀಲ ಓಟ, ಗುಡ್ಡಗಾಡು ಓಟ ಗುಂಡೆಸೆತ ಮುಂತಾದ ಸ್ಪರ್ಧಾ ಕಾರ್ಯಕ್ರಮಗಳು ನಡೆಯಲಿವೆ. ವಿಶೇಷವಾಗಿ ಮಹಿಳೆಯರು ಹಾಗೂ ಪುರುಷರಿಗೆ ಹಗ್ಗಜಗ್ಗಾಟ ನಡೆಯಲಿದೆ. ಸಂಜೆ 5 ಗಂಟೆಗೆ ವೈಭವದ ಶೋಭಾಯಾತ್ರೆಗೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಪುತ್ತೂರು ವಿಜಯ ಸಾಮ್ರಾಟ್ ಚಾರಿಟೇಬಲ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಸಹಜ್ ರೈ ಬಳೆಜ್ಜ ಚಾಲನೆ ನೀಡುವರು. ಬಳಿಕ ಶೋಭಾಯಾತ್ರೆ ಕೆಮ್ಮಾಯಿ, ಕೃಷ್ಣನಗರ, ಕೇಪುಳು, ಪಡೀಲು ಮೂಲಕ ಚಲಿಸಿ ಕೆಮ್ಮಾಯಿಯಲ್ಲಿ ಸಮಾಪನಗೊಳ್ಳಲಿದೆ. ಈ ಸಂದರ್ಭದಲ್ಲಿ ಶೋಭಾಯಾತ್ರೆ ಯುದ್ದಕ್ಕೂ ಅಟ್ಟಿ ಮಡಿಕೆ ಒಡೆಯುವ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಬೆಳಿಗ್ಗೆ 9.30 ಕ್ಕೆ ನಡೆಯುವ ಸಭಾ ಕಾರ್ಯಕ್ರಮವನ್ನು ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಉದ್ಘಾಟಿಸಲಿದ್ದು, ಮೊಸರುಕುಡಿಕೆ ಉತ್ಸವ ಸಮಿತಿ ಅಧ್ಯಕ್ಷ ಚಿದಾನಂದ ರೈ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಸಂಜೀವ ಮಠಂದೂರು, ನಗರಸಭೆ ಸದಸ್ಯರಾದ ಸುಂದರ ಪೂಜಾರಿ ಬಡಾವು, ಲೀಲಾವತಿ, ದ್ವಾರಕ ಕನ್ ಸ್ಟ್ರಕ್ಷನ್ ನ ಗೋಪಾಲಕೃಷ್ಣ ಭಟ್, ಮಂಗಳೂರು ಉದ್ಯಮಿ ಹರೀಶ್ ಪ್ರಭು, ಶಶಿಧರ ಕೆಮ್ಮಾಯಿ, ವಿಷ್ಣು ಯುವಕ ಮಂಡಲದ ಅಧ್ಯಕ್ಷ ದಯಾನಂದ ಗೌಡ ಪಾಲ್ಗೊಳ್ಳಲಿದ್ದಾರೆ. ರಾತ್ರಿ 8 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಅಶೋಕ್ ಕುಮಾರ್ ರೈ ವಹಿಸಲಿದ್ದು, ಸಂಸದ ಕ್ಯಾ.ಬ್ರಿಜೇಶ್‍ಚೌಟ ಬಹುಮಾನ ವಿತರಿಸುವರು. ಮುಖ್ಯ ಅತಿಥಿಗಳಾಗಿ ಹಲವಾರು ಗಣ್ಯರು ಪಾಲ್ಗೊಳ್ಳುವರು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿಷ್ಣು ಯುವಕ ಮಂಡಲದ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಎಂ., ಕಾರ್ಯಾಧ್ಯಕ್ಷ ಪ್ರಶಾಂತ್ ಬೋವುದಕಾಡು, ಕೋಶಾಧಿಕಾರಿ ದಯಾನಂದ ಗೌಡ ಕೆಮ್ಮಾಯಿ, ಉಪಾಧ್ಯಕ್ಷ ಸುರೇಂದ್ರ ಪೂಜಾರಿ, ಕ್ರೀಡಾ ಕಾರ್ಯದರ್ಶಿ ಯಶವಂತ ಉಪಸ್ಥಿತರಿದ್ದರು.