ಅಭಿಮಾನಿಗಳ ಕಣ್ಣು ತಪ್ಪಿಸಲು ವಾಹನಕ್ಕೆ ಪರದೆ
ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಶೇಷ ಸೌಲಭ್ಯ ಪಡೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವ ಕೊಲೆ ಆರೋಪಿ ನಟ ದರ್ಶನ್ನನ್ನು ಪೊಲೀಸರು ಇಂದು ಬೆಳ್ಳಂಬೆಳಗ್ಗೆ ಬಳ್ಳಾರಿಯ ಜೈಲಿಗೆ ಕರೆದುಕೊಂಡು ಹೋಗಿದ್ದಾರೆ. ಮುಂಜಾನೆ 4.30ರ ಸುಮಾರಿಗೆ ಪರಪ್ಪನ ಅಗ್ರಹಾರ ಜೈಲಿನಿಂದ ದರ್ಶನ್ನನ್ನು ಪೊಲೀಸರು ಕರೆದೊಯ್ದಿದ್ದಾರೆ. 10 ಗಂಟೆಯೊಳಗೆ ಬಳ್ಳಾರಿ ಜೈಲು ತಲುಪುವ ಸಾಧ್ಯತೆ ಇದೆ. ಬೊಲೆರೋ ವಾಹನದಲ್ಲಿ ಪೊಲೀಸ್ ಬಿಗಿ ಭದ್ರತೆಯಲ್ಲಿ ಆರೋಪಿಗಳನ್ನು ಕರೆದೊಯ್ಯಲಾಗಿದೆ.
ಇತ್ತೀಚೆಗೆ ದರ್ಶನ್ ಜೈಲಿನಲ್ಲಿ ಕುಖ್ಯಾತ ರೌಡಿಗಳೊಂದಿಗೆ ಚೇರ್ನಲ್ಲಿ ಕುಳಿತು ಕಾಫಿ ಕುಡಿಯುತ್ತಾ ಸಿಗರೇಟ್ ಸೇದುತ್ತಿರುವ ಫೋಟೊ ವೈರಲ್ ಆಗಿತ್ತು. ಇದರ ಬೆನ್ನಿಗೆ ದರ್ಶನ್ ಜೈಲಿನಿಂದಲೇ ವೀಡಿಯೊ ಕಾಲ್ ಮಾಡಿರುವುದು ಕೂಡ ಬಹಿರಂಗವಾಗಿ ಸರಕಾರ ವಿಪರೀತ ಮುಜುಗರಕ್ಕೆ ಸಿಲುಕಿತ್ತು. ಈ ಹಿನ್ನೆಲೆಯಲ್ಲಿ ಆತನನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗಿದೆ.
ರೇಣುಕಾಸ್ವಾಮಿ ಕೊಲೆ ಆರೋಪಿಗಳನ್ನು ಬೇರೆ ಬೇರೆ ಜೈಲಿಗೆ ಶಿಫ್ಟ್ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶಿಸಿದ್ದರು. ಅದರಂತೆ ಕೆಲವು ಆರೋಪಿಗಳನ್ನು ಮೈಸೂರು ಜೈಲಿಗೆ ಸ್ಥಳಾಂತರಿಸಲಾಗಿದೆ.
ಬಳ್ಳಾರಿ ಜೈಲಿನ ಸಮೀಪ ದರ್ಶನ್ ಅಭಿಮಾನಿಗಳು ಸೇರುವ ಸಾಧ್ಯತೆ ಇರುವ ಕಾರಣ ಬೆಳ್ಳಂಬೆಳಗ್ಗೆ ಸ್ಥಳಾಂತರ ಮಾಡಲಾಗಿದೆ. ಬೊಲೆರೋ ಜೀಪ್ನ ಕಿಟಿಕಿ ಗಾಜುಗಳಿಗೆ ಪರದೆ ಹಾಕಿ ಮರೆಮಾಡಿ ಕರೆದೊಯ್ಯಲಾಗಿದೆ.
ರೇಣುಕಾಸ್ವಾಮಿ ಕೊಲೆ ಕೇಸ್ಗೆ ಸಂಬಂಧಿಸಿ ಜೂನ್ 11ರಂದು ದರ್ಶನ್ ಬಂಧನಕ್ಕೆ ಒಳಗಾಗಿದ್ದಾನೆ. ದರ್ಶನ್ ಹೊರಗಿನ ಊಟವನ್ನು ತರಿಸಿಕೊಂಡು ತಿನ್ನುತ್ತಿದ್ದ ಎಂಬ ವಿಚಾರವೂ ಬೆಳಕಿಗೆ ಬಂದಿದೆ.