ಪುತ್ತೂರು: ಸಂಘರ್ಷದಿಂದ ಹುಟ್ಟಿದ ಬಿಜೆಪಿಯವರಿಗೆ ಸಂಘರ್ಷದ ಪಾಠ ಹೇಳಬೇಡಿ, ದಾರಿ ತೋರಿಸಬೇಡಿ. ಹೀಗೆಂದು ಗುಡುಗಿದರು ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ.
ಪುತ್ತೂರು ಬಿಜೆಪಿ ಯುವಮೋರ್ಚಾ, ನಗರದ ಹಾಗೂ ಗ್ರಾಮಾಂತರ ಮಂಡಲದ ವತಿಯಿಂದ ಕಾಂಗ್ರೆಸ್ ಹಾಗೂ ರಾಜ್ಯಪಾಲರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ಎಂಎಲ್ ಸಿ ಐವನ್ ಡಿ’ಸೋಜಾ ಹೇಳಿಕೆಯನ್ನು ಖಂಡಿಸಿ ನಗರದ ದರ್ಬೆ ವೃತ್ತದಲ್ಲಿ ನಡೆದ ಬೃಹತ್ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ನ ದರ್ಪ, ಭ್ರಷ್ಟಾಚಾರ ಆಡಳಿತ ಜನರಿಗೆ ಮನದಟ್ಟು ಮಾಡುವ ನಿಟ್ಟಿನಲ್ಲಿ ಈ ಪ್ರತಿಭಟನೆ ಹಮ್ಮಿಕೊಂಡಿದೆ ಹೊರತು ಕೇವಲ ಐವನ್ ಡಿ’ಸೋಜಾ ಅವರ ಹೇಳಿಕೆ ವಿರುದ್ಧ ಮಾತ್ರ ಅಲ್ಲ ಎಂದು ಹೇಳಿದರು.
ಮುಡಾ ಪ್ರಕರಣದಲ್ಲಿ ಭ್ರಷ್ಟಾಚಾರ ಮಾಡಿಲ್ಲ ಎಂದು ಪ್ರತೀ ಬಾರಿಯೂ ಪುಂಗಿ ಊದುತ್ತಿರುವ ಸಿಎಂ ಸಿದ್ಧರಾಮಯ್ಯನವರಿಗೆ ಅಸ್ಲೆಂಬಿಯಲ್ಲಿ ಉತ್ತರ ನೀಡಲಿದ್ದೇವೆ. ತಾಕತ್ತಿದ್ದರೆ ಭ್ರಷ್ಟಾಚಾರ ಮಾಡಿಲ್ಲ ಎಂದು ಹೇಳಲಿ ಎಂದು ಸವಾಲೆಸೆದರು. ಭ್ರಷ್ಟಾಚಾರದ ಕೂಪದಲ್ಲಿ ಮಲಗುತ್ತಿರುವ ಕಾಂಗ್ರೆಸ್ ನಿಂದ ಬಿಜೆಪಿ ಕಲಿಯಬೇಕಾದ್ದು ಏನೂ ಇಲ್ಲ. ಪ್ರಸ್ತುತ ಅಭಿವೃದ್ಧಿ ಕೆಲಸ ಇಡೀ ರಾಜ್ಯದಲ್ಲಿ ಎಲ್ಲೂ ಆಗುತ್ತಿಲ್ಲ. ಮುಂದಿನ ದಿನಗಳಲ್ಲಿ ಕೇವಲ ಭ್ರಷ್ಟಾಚಾರದಲ್ಲೇ ಮುಳುಗಿದರೆ, ಹಿಂದೂ ಕಾರ್ಯಕರ್ತರ ವಿರುದ್ಧ ಕೇಸು ಹಾಕುತ್ತಿರುವ ಪ್ರಕರಣ ಕಂಡು ಬಂದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಮುಖಂಡರ ಮನೆಮುಂದೆ ಪ್ರತಿಭಟನೆ ಮಾಡಬೇಕಾದೀತು ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾ ಯುವಮೋರ್ಚಾ ಕಾರ್ಯದರ್ಶಿ ಶ್ರೀಕೃಷ್ಣ ಪ್ರಾಸ್ತಾವಿಕವಾಗಿ ಮಾತನಾಡಿ, ಐವನ್ ಡಿ’ಸೋಜಾ ಸಂವಿಂಧಾನ ವಿರೋಧಿ ಹೇಳಿಕೆ ನೀಡಿ ಇಂದಿಗ ಹಲವು ದಿನಗಳಾಗಿವೆ. ಅವರ ವಿರುದ್ಧ ಪ್ರತಿಭಟನೆ, ಪತ್ರಿಕಾಗೋಷ್ಠಿಗಳು ನಡೆದರೂ ಇನ್ನೂ ಪೊಲೀಸ್ ಇಲಾಖೆ ಕೇಸು ದಾಖಲಿಸಲು ಮೀನಮೇಷ ಎಣಿಸುತ್ತಿದೆ. ಪೊಲೀಸರು ಕಾಂಗ್ರೆಸ್ ನ ಕೈಗೊಂಬೆಯಾಗಿದ್ದಾರೆ. ತಕ್ಷಣ ಐವನ್ ಡಿ’ಸೋಜಾ ಅವರ ಮೇಲೆ ಕೇಸು ದಾಖಲಿಸಿ ಅವರನ್ನು ಬಂಧಿಸದಿದ್ದರೆ ಮುಂದಿ ಹೋರಾಟ ಪರಿಣಾಮಕ್ಕೆ ಸರಕಾರವೇ ಜವಾಬ್ದಾರಿಯಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ, ಬಿಜೆಪಿ ಮುಖಂಡರಾದ ಪ್ರಸನ್ನ ಕುಮಾರ್ ಮಾರ್ತ, ಅರುಣ್ ಕುಮಾರ್ ಪುತ್ತಿಲ, ಮುರಳೀಕೃಷ್ಣ ಹಸಂತಡ್ಕ, ಪುರುಷೋತ್ತಮ ಮುಂಗ್ಲಿಮನೆ, ಪಿ.ಜಿ.ಜಗನ್ನಿವಾಸ ರಾವ್, ಆರ್.ಸಿ.ನಾರಾಯಣ್, ನಿತೀಶ್ ಕುಮಾರ್ ಶಾಂತಿವನ, ಹರಿಪ್ರಸಾದ್ ಯಾದವ್, ಅಪ್ಪಯ್ಯ ಮಣಿಯಾಣಿ, ಜಯಶ್ರೀ ಶೆಟ್ಟಿ, ವಿದ್ಯಾ ಆರ್.ಗೌರಿ, ದೀಕ್ಷಾ ಪೈ, ಮತ್ತಿತರ ಮುಖಂಡರು ಪಾಲ್ಗೊಂಡಿದ್ದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿರೂಪಾಕ್ಷ ಭಟ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
(ಫೋಟೊ ಇದೆ… 28ಕೆಎಂ-ಬಿಜೆಪಿ : ಬಿಜೆಪಿ ಪ್ರತಿಭಟನೆಯನ್ನುದ್ದೇಶಿಸಿ ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಮಾತನಾಡಿದರು.)