ಬರಗಾಲದಿಂದ ಕಂಗೆಟ್ಟಿರುವ ದೇಶದಲ್ಲಿ ಆಹಾರಕ್ಕಾಗಿ ಸರಕಾರದಿಂದಲೇ ಕಾಡುಪ್ರಾಣಿಗಳ ವಧೆ
ವಿಂಡ್ಹೋಕ್: ಜಗತ್ತಿನಾದ್ಯಂತ ಕಾಡುಪ್ರಾಣಿಗಳನ್ನು ರಕ್ಷಿಸಲು ಇನ್ನಿಲ್ಲದ ಪ್ರಯತ್ನಗಳನ್ನು ನಡೆಯುತ್ತಿವೆ. ಭಾರತವೂ ಸೇರಿದಂತೆ ಅನೇಕ ದೇಶಗಳಲ್ಲಿ ಕಾಡುಪ್ರಾಣಿಗಳ ಹತ್ಯೆಗೆ ಕಠಿಣ ಶಿಕ್ಷೆಯಿದೆ. ಅದರೆ ನಮೀಬಿಯಾ ಎಂಬ ಆಫ್ರಿಕಾದ ದೇಶದಲ್ಲಿ ಸರ್ಕಾರವೇ ಕಾಡುಪ್ರಾಣಿಗಳನ್ನು ಕೊಲ್ಲಲು ಆದೇಶಿಸಿದೆ.
ಬರದಿಂದ ತತ್ತರಿಸಿರುವ ನಮೀಬಿಯಾ ಜನರಿಗೆ ಆಹಾರ ಒದಗಿಸಲು 83 ಆನೆಗಳು ಸಹಿತ 723 ಕಾಡುಪ್ರಾಣಿಗಳನ್ನು ಕೊಲ್ಲುವ ಯೋಜನೆ ರೂಪಿಸಿದೆ. ತೀವ್ರ ಬರಗಾಲದಿಂದ ಆಹಾರಕ್ಕಾಗಿ ಹೆಣಗಾಡುತ್ತಿರುವವರಿಗೆ ಮಾಂಸ ವಿತರಿಸುವುದಾಗಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ದೇಶದಲ್ಲಿ ಪ್ರಾಣಿಗಳ ಸಂಖ್ಯೆ ಲಭ್ಯವಿರುವ ಹುಲ್ಲುಗಾವಲು ಮತ್ತು ನೀರಿನ ಸಂಪನ್ಮೂಲಗಳನ್ನು ಮೀರಿದೆ. ಇದರಿಂದಾಗಿ ಜನವಸತಿ ಇರುವ ಸ್ಥಳಗಳಲ್ಲಿ ಕಾಡುಪ್ರಾಣಿಗಳು ಮತ್ತು ಮಾನವರ ಸಂಘರ್ಷ ಹೆಚ್ಚಾಗಿದೆ. ಈ ಸಂಘರ್ಷವನ್ನು ನಿಯಂತ್ರಿಸಲು ಗುರುತಿಸಲಾದ ಪ್ರದೇಶಗಳಿಂದ 83 ಆನೆಗಳನ್ನು ಕೊಲ್ಲಲಾಗುತ್ತದೆ ಮತ್ತು ಮಾಂಸವನ್ನು ಬರ ಪರಿಹಾರ ಕಾರ್ಯಕ್ರಮಕ್ಕೆ ಬಳಸಲಾಗುತ್ತದೆ ಎಂದು ನಮೀಬಿಯಾ ಪರಿಸರ ಸಚಿವಾಲಯ ತಿಳಿಸಿದೆ.
ಆನೆಗಳ ಜೊತೆಗೆ 30 ಹಿಪ್ಪೋಗಳು, 60 ಎಮ್ಮೆಗಳು, 50 ಇಂಪಾಲಾಗಳು, 100 ನೀಲಿ ಕಾಡುಕೋಣಗಳು, 300 ಜೀಬ್ರಾಗಳು ಮತ್ತು 100 ಎಲ್ಯಾಂಡ್‌ಗಳನ್ನು ಕೊಲ್ಲಲು ಯೋಜಿಸಿದೆ. ವೃತ್ತಿಪರ ಬೇಟೆಗಾರರು ಮತ್ತು ಸರ್ಕಾರದಿಂದ ಗುತ್ತಿಗೆ ಪಡೆದ ಕಂಪನಿಗಳು ಈಗಾಗಲೇ 157 ಪ್ರಾಣಿಗಳನ್ನು ಬೇಟೆಯಾಡಿದ್ದು, 56,800 ಕೆಜಿ ಮಾಂಸವನ್ನು ಜನರಿಗೆ ಹಂಚಲಾಗಿದೆ.
ನೈಸರ್ಗಿಕ ಸಂಪನ್ಮೂಲಗಳನ್ನು ನಾಗರಿಕರ ಅನುಕೂಲಕ್ಕಾಗಿ ಬಳಸಲು ಸಂವಿಧಾನದಲ್ಲಿ ಅನುಮತಿ ಇದೆ ಎಂದು ನಮೀಬಿಯಾ ಸರ್ಕಾರ ಕಾಡುಪ್ರಾಣಿಗಳ ವಧೆಯನ್ನು ಸಮರ್ಥಿಸಿಕೊಂಡಿದೆ.