ಬೆಂಗಳೂರು: ಸಿದ್ದರಾಮಯ್ಯ ಮುಖ್ಯಮಂತ್ರಿ ಆದ ಮೇಲೆ 5,000 ಕೋಟಿ ರೂ. ಹಗರಣವಾಗಿದೆ. ಅಭಿವೃದ್ಧಿ ಮಾಡುತ್ತೇವೆ ಎಂದು ಅಹಿಂದಾ ಸಮಾವೇಶ ಮಾಡಿಕೊಂಡು ಈಗ ಅಹಿಂದಾ ವರ್ಗಕ್ಕೆ ಅನ್ಯಾಯ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಎಸ್/ಎಸ್ಟಿಗೆ ಮೀಸಲಾದ ಹಣವನ್ನು ಲೂಟಿ ಹೊಡೆದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.
ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಕ್ಷಣಗಣನೆ ಆರಂಭವಾಗಿದ್ದು, ಯಾವಾಗ ಬೇಕಾದರೂ ರಾಜೀನಾಮೆ ನೀಡಬಹುದು. ಮಂತ್ರಿಗಳು ವಿಧಾನಸೌಧಕ್ಕೆ ಬರುತ್ತಿಲ್ಲ. ಡಿ.ಕೆ ಶಿವಕುಮಾರ್ ವೈಷ್ಣೊದೇವಿಗೆ ಹೋಗಿ ಆರ್ಶಿವಾದ ಪಡೆದುಕೊಂಡು ಬಂದಿದ್ದಾರೆ. ಇದೀಗ ಮುಖ್ಯಮಂತ್ರಿಗಳ ರಾಜೀನಾಮೆಗೆ ಕ್ಷಣಗಣನೆ ಶುರುವಾಗಿದ್ದು, ಸಿದ್ದರಾಮಯ್ಯ ಯಾವಾಗ ಬೇಕಾದರೂ ರಾಜೀನಾಮೆ ನೀಡಬಹುದು ಎಂದು ಭವಿಷ್ಯ ನುಡಿದಿದ್ದಾರೆ.
ಬಿಜೆಪಿ ಮತ್ತು ಜೆಡಿಎಸ್ ಭ್ರಷ್ಟ ಕಾಂಗ್ರೆಸ್ ವಿರುದ್ಧ ಸದನದ ಹೊರಗೆ ಮತ್ತು ಒಳಗೆ ಹೋರಾಟ ಮಾಡುತ್ತಾ ಬಂದಿದೆ. ಈ ಹೋರಾಟ ಪರಿಣಾಮ ಬಿ.ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಯಿತು. ಸಿಎಂ ಸಿದ್ದರಾಮಯ್ಯ ಅವರು ವಾಲ್ಮೀಕಿ ನಿಗಮದಲ್ಲಿ ಹಗರಣ ಆಗಿದೆ ಎಂದು ಒಪ್ಪಿಕೊಂಡಿದ್ದಾರೆ. ಈ ಹಣ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಲೋಕಸಭೆ ಚುನಾವಣೆಗೆ ಬಳಕೆಯಾಗಿದೆ, ಹೆಂಡ ಖರೀದಿ ಮಾಡಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ ಎಂದರು.
ರಾಜ್ಯ ಸರ್ಕಾರ ರಚಿಸಿದ ಎಸ್ಐಟಿ ತರಾತುರಿಯಲ್ಲಿ ತನಿಖೆ ಮಾಡಿ ನಾಗೇಂದ್ರ ಮತ್ತು ದದ್ದಲ್ಗೆ ಕ್ಲೀನ್ಚಿಟ್ ಕೊಟ್ಟಿದೆ. ಇದು ನಿರೀಕ್ಷಿತ ಎನ್ನುವುದು ನಮ್ಮಗೂ ಗೊತ್ತಿತ್ತು. ಎಸ್ಐಟಿ ನಾಗೇಂದ್ರ ಮತ್ತು ದದ್ದಲ್ ತಪ್ಪಿಸ್ಥರು ಎಂದಿದ್ದರೆ ಸಿಎಂಗೆ ಸಮಸ್ಯೆಯಾಗುತ್ತಿತ್ತು. ಸಿಎಂ ಬುಡಕ್ಕೆ ಬರುತ್ತಿತ್ತು ಎನ್ನುವ ಕಾರಣಕ್ಕೆ ಕ್ಲೀನ್ಚಿಟ್ ಕೊಟ್ಟಿದೆ. ಮೈಸೂರಿನ ಮೂಡಾದಲ್ಲೂ ಬಡವರಿಗೆ ವಂಚನೆ ಮಾಡಿ, ರಿಯಲ್ ಎಸ್ಟೇಟ್ ನಡೆಸುವ ಪುಡಾರಿಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಬಿಜೆಪಿ-ಜೆಡಿಎಸ್ ಎತ್ತಿರುವ ಪ್ರಶ್ನೆಗಳಿಗೆ ಸಿಎಂ ಬಳಿ ಉತ್ತರ ಇಲ್ಲ. ಬಿಜೆಪಿ ಸರ್ಕಾರ ಇದ್ದಾಗಲೇ ನಿವೇಶನ ನೀಡಿದೆ ಎಂದು ಸಿಎಂ ಹೇಳಿದ್ದರು. ಬಿಜೆಪಿ ಅವಧಿಯಲ್ಲಿ 14 ನಿವೇಶನ ನೀಡಿದೆ ಎಂದು ಆರೋಪ ಮಾಡಿದೆ. ಆದರೆ, ಇದು ಮುಡಾದ ಯಾವ ಸಭೆಯಲ್ಲಿ ಅನುಮತಿ ನೀಡಿಲ್ಲ. ರಾಜ್ಯ ಸರ್ಕಾರವೂ ಇದಕ್ಕೆ ಅನುಮತಿ ಪಡೆದುಕೊಂಡಿಲ್ಲ. ಅಕ್ರಮವಾಗಿ 14 ನಿವೇಶನ ಪಡೆದುಕೊಂಡಿದ್ದಾರೆ ಎಂದು ಗೊತ್ತಿದ್ದರೂ ವಿರೋಧ ಪಕ್ಷದ ನಾಯಕರಾಗಿ ಅನಾಯಸವಾಗಿ ಬರುತ್ತಿದೆ ಎಂದು ಸುಮ್ಮನೆ ಕೂತಿದ್ದರು ಎಂದು ವ್ಯಂಗ್ಯವಾಡಿದರು.