ಡಿಜಿಟಲ್ ಜಾಹೀರಾತು ಮಾರ್ಗಸೂಚಿ ಬಿಡುಗಡೆ
ಬೆಂಗಳೂರು : ಡಿಜಿಟಲ್ ಮಾಧ್ಯಮ ಈಗ ಬಹಳ ಪ್ರಭಾವಶಾಲಿಯಾಗಿದ್ದು, ಹೆಚ್ಚು ಜನರನ್ನು ತಲುಪುತ್ತದೆ. ಅದರಲ್ಲೂ ಯುವ ಸಮುದಾಯವನ್ನು ತಲುಪಲು ಡಿಜಿಟಲ್ ಮಾಧ್ಯಮ ಸುಲಭ ದಾರಿ ಎಂದು ಕಂಡುಕೊಂಡಿರುವ ಸರಕಾರ ಇನ್ನು ಮುಂದೆ ಡಿಜಿಟಲ್ ಮಾಧ್ಯದಲ್ಲೂ ಜಾಹೀರಾತು ನೀಡಲು ನಿರ್ಧರಿಸಿದೆ. ಸಾಂಪ್ರದಾಯಿಕ ಜಾಹೀರಾತುಗಳಿಗೆ ಹೋಲಿಸಿದರೆ ಡಿಜಿಟಲ್ ಜಾಹೀರಾತುಗಳು ಹೆಚ್ಚು ವ್ಯಾಪ್ತಿ ಮತ್ತು ನಿರ್ದಿಷ್ಟ ಜನರನ್ನು ತಲುಪುತ್ತವೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಡಿಜಿಟಲ್ ಜಾಹೀರಾತು ಮಾರ್ಗಸೂಚಿ 2024ನ್ನು ಜಾರಿಗೊಳಿಸಿ ಡಿಜಿಟಲ್ ಜಾಹೀರಾತಿಗೆ ಹೆಚ್ಚಿನ ಆದ್ಯತೆ ನೀಡಲು ಸರ್ಕಾರ ನಿರ್ಧಾರ ಮಾಡಿದೆ.
ಡಿಜಿಟಲ್ ಜಾಹೀರಾತುಗಳಿಗೆ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ಜಾಹೀರಾತು ನೀಡಲು ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ. ಜೊತೆಗೆ ಡಿಜಿಟಲ್ ಇನ್‌ಫ್ಲುಯೆನ್ಸರ್‌ಗಳ ಆಯ್ಕೆಗೆ ಮಾನದಂಡ ನಿಗದಿ ಮಾಡಿದ್ದು, ಡಿಜಿಟಲ್ ಜಾಹೀರಾತು ಏಜೆನ್ಸಿಗಳಿಗೂ ಮಾನದಂಡ ಹೇರಲಾಗಿದೆ.
ಅರ್ಹ ಡಿಜಿಟಲ್ ಮಾಧ್ಯಮ ಘಟಕಗಳು
*ವಿಡಿಯೋ ಸ್ಕ್ರೀಮಿಂಗ್ ಪ್ಲಾಟ್ಫಾರ್ಮ್ಗಳು: ಗೂಗಲ್ (ಯೂಟ್ಯೂಬ್), ಮೆಟಾ (ಫೇಸ್ಬುಕ್), ಇನ್ಸ್ಟಾಗ್ರಾಂ, ವಾಟ್ಸಾಪ್ ಬಿಸಿನೆಸ್, ಇತರ.
*ಸರ್ಚ್ ಇಂಜಿನ್ಗಳು: ಗೂಗಲ್, ಬಿಂಗ್ ಮತ್ತು ಇತರ.
*ಸಾಮಾಜಿಕ ಜಾಲತಾಣಗಳು: ಎಕ್ಸ್(ಟ್ವೀಟರ್), ಫೇಸ್ಬುಕ್, ಇನ್ಸ್ಟಾಗ್ರಾಂ, ವಾಟ್ಸಾಪ್, ಟೆಲಿಗ್ರಾಂ, ಲಿಂಕ್ಡ್ಇನ್, ಇತ್ಯಾದಿ.
*ಒಟಿಟಿ ಪ್ಲಾಟ್ಫಾರ್ಮ್: ನೆಟ್ಫ್ಲಿಕ್ಸ್, ಅಮೆಜಾನ್ ಫ್ರೈಮ್, ಸನ್ನೆಕ್ಸ್ಟ್, ಇತರ.
*ಫಿನ್ಟೆಕ್ ಪ್ಲಾಟ್ಫಾರ್ಮ್: ಪೇಟಿಎಂ, ಫೋನ್ಪೇ ಮತ್ತು ಗೂಗಲ್ಪೇ ಇತರ.
ಡಿಜಿಟಲ್ ಜಾಹಿರಾತು ಏಜೆನ್ಸಿಗೆ ಅರ್ಹತೆ
*ಡಿಜಿಟಲ್ ಜಾಹೀರಾತಿಗಾಗಿ ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯೊಂದಿಗೆ ಸಹಯೋಗ ಹೊಂದಲು ಏಜೆನ್ಸಿಯ ಈ ಕೆಳಗಿನ ಮಾನದಂಡಗಳನ್ನು ಪೂರೈಸಿರಬೇಕು.
*ಭಾರತ ಸರ್ಕಾರದ ರಿಜಿಸ್ಟ್ರಾರ್ ಆಫ್ ಕಂಪನೀಸ್ನಲ್ಲಿ ನೋಂದಣಿಯಾದ ಕಾನೂನುಬದ್ಧ ಸಂಘಟಿತ ಘಟಕವಾಗಿರಬೇಕು-ಪ್ರೈವೇಟ್ ಲಿಮಿಟೆಡ್ ಕಂಪನಿ, ಪಬ್ಲಿಕ್ ಲಿಮಿಟೆಡ್ ಕಂಪನಿ, ಲಿಮಿಟೆಡ್ ಲಯಬಿಲಿಟಿ ಪಾಲುದಾರಿಕೆ.
*ಎಂಪ್ಯಾನೆಲಿಂಗ್ ಸಮಯದಲ್ಲಿ ಕನಿಷ್ಟ ಎರಡು ವರ್ಷವಾಗಿರಬೇಕು.
*ಮಾನ್ಯವಾದ ಜಿಎಸ್ಟಿ ನೋಂದಣಿ ಇರಬೇಕು.
*ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರಬೇಕು ಅಥವಾ ಕರ್ನಾಟಕದಲ್ಲಿ ಪೂರ್ಣ ಪ್ರಮಾಣದ ಕಚೇರಿ ಇರಬೇಕು.
*ಕನ್ನಡ ಮತ್ತು ಇಂಗ್ಲೀಷ್ನಲ್ಲಿ ಪ್ರಾಮುಖ್ಯತೆ ಇರಬೇಕು.