ಪ್ರೀಮಿಯಂ ಮದ್ಯದ ಬೆಲೆ ಪರಿಷ್ಕರಣೆ ಮಾಡಿ ಅಧಿಸೂಚನೆ
ಬೆಂಗಳೂರು: ಮದ್ಯಪ್ರಿಯರಿಗೆ ಸರಕಾರ ಮೊಸರು ಕುಡಿಕೆ ಸಂದರ್ಭದಲ್ಲಿ ಗುಡ್‌ನ್ಯೂಸ್ ನೀಡಿದೆ. ನಿರೀಕ್ಷಿಸಿದಂತೆ ಇಂದಿನಿಂದ ಮದ್ಯ ದರ ಪರಿಷ್ಕರಣೆಯಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುವ ಪ್ರೀಮಿಯಂ ಬ್ರ್ಯಾಂಡ್‌ಗಳ ದರ ಇಳಿಸಲಾಗಿದೆ. ಇದರಿಂದಾಗಿ ಪ್ರೀಮಿಯಂ ಮದ್ಯದ ಬೆಲೆ 600 ರೂ.ಯಷ್ಟು ಇಳಿಕೆಯಾಗಲಿದೆ. ಇದೇ ವೇಳೆ ಬಿಯರ್ ಬೆಲೆ ಮತ್ತೆ 20 ರೂ. ತನಕ ಏರಿಕೆಯಾಗಲಿದೆ.
ಭಾರತದಲ್ಲಿ ತಯಾರಿಸಿರುವ ಮದ್ಯದ ಅಬಕಾರಿ ಸುಂಕದ ಸ್ಲ್ಯಾಬ್‌ಗಳ ಸಂಖ್ಯೆಯನ್ನು ಇತರ ರಾಜ್ಯಗಳ ಮದ್ಯದ ದರಕ್ಕೆ ಅನುಗುಣವಾಗಿ ಹೊಂದಾಣಿಕೆ ಮಾಡಿ ಮದ್ಯ ಮತ್ತು ಬಿಯರ್ ಬೆಲೆಗಳನ್ನು ಪರಿಷ್ಕರಿಸಲು ರಾಜ್ಯ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಿದೆ. ಇದರಿಂದ ರಾಜ್ಯದಲ್ಲಿ ಮದ್ಯದ ದರದಲ್ಲಿ ಸ್ವಲ್ಪಮಟ್ಟಿನ ವ್ಯತ್ಯಾಸವಾಗಲಿದ್ದು, ಪರಿಷ್ಕೃತ ದರ ಇಂದಿನಿಂದಲೇ ಜಾರಿಯಾಗಲಿದೆ.
ಈಗಾಗಲೇ ಕರಡು ಅಧಿಸೂಚನೆ ಹೊರಡಿಸಿ ಒಂದೂವರೆ ತಿಂಗಳಾದರೂ ಅಂತಿಮಗೊಳಿಸದ ಕಾರಣ ಮಾರುಕಟ್ಟೆಯಲ್ಲಿ ಪ್ರೀಮಿಯಂ ಬ್ರಾಂಡ್‌ಗಳ ಮದ್ಯಕ್ಕೆ ಭಾರಿ ಕೊರತೆ ಉಂಟಾಗಿತ್ತು. ಇದೀಗ ಅಂತಿಮ ಅಧಿಸೂಚನೆಯಂತೆ ಸ್ಲ್ಯಾಬ್‌ಗಳ ಸಂಖ್ಯೆ 18ರಿಂದ 16ಕ್ಕೆ ಇಳಿಸಲಾಗಿದೆ. ಆದರೆ ಮೊದಲ ಮೂರು ಸ್ಲ್ಯಾಬ್‌ಗಳಲ್ಲಿ ದರದ ವ್ಯತ್ಯಾಸ ಆಗುವುದಿಲ್ಲ. ನಾಲ್ಕನೇ ಸ್ಲ್ಯಾಬ್‌ನಲ್ಲಿ ಮದ್ಯದ ದರ ಸ್ವಲ್ಪ ಏರಿಕೆಯಾಗಲಿದೆ. ಉಳಿದಂತೆ ಐದನೇ ಸ್ಲಾಬ್ ಬಳಿಕ 16ನೇ ಸ್ಲ್ಯಾಬ್‌ವರೆಗೆ ದರ ಕಡಿಮೆಯಾಗಲಿದೆ. ಆ ಸ್ಲ್ಯಾಬ್‌ಗಳ ವಿಸ್ಕಿ, ರಮ್, ಬ್ರಾಂಡಿಗಳ ಬೆಲೆ ಕಡಿಮೆಯಾಗಲಿದೆ.
ರಾಜ್ಯದಲ್ಲಿ ಈವರೆಗೆ 18 ಸ್ಲ್ಯಾಬ್‌ಗಳಲ್ಲಿ ಮದ್ಯದ ಮೇಲೆ ಅಬಕಾರಿ ತೆರಿಗೆ ವಿಧಿಸಲಾಗುತ್ತಿತ್ತು. ಈಗ ಸ್ಲ್ಯಾಬ್‌ಗಳ ಸಂಖ್ಯೆಯನ್ನು 16ಕ್ಕೆ ಇಳಿಕೆ ಮಾಡಲಾಗಿದೆ. ಪರಿಷ್ಕೃತ ಪಟ್ಟಿಯ ಪ್ರಕಾರ, ಪ್ರತಿ ಬಲ್ಕ್ ಲೀಟರ್‌ನ ಘೋಷಿತ ಉತ್ಪಾದನಾ ದರ 450 ರೂ. ಹೊಂದಿರುವ ಮದ್ಯ ಮೊದಲ ಸ್ಲ್ಯಾಬ್‌ನಲ್ಲಿದ್ದರೆ 20 ಸಾವಿರ ರೂ. ಮತ್ತು ಅದಕ್ಕಿಂತ ಹೆಚ್ಚಿನ ಘೋಷಿತ ಉತ್ಪಾದನಾ ದರ ಹೊಂದಿರುವ ಮದ್ಯವನ್ನು 16ನೇ ಸ್ಲ್ಯಾಬ್‌ಗೆ ಸೇರಿಸಲಾಗಿದೆ.