ರಾಜಾತಿಥ್ಯ ಸಿಕ್ಕಿರುವುದು ಬಯಲಾದ ಬಳಿಕ ಸರಕಾರಕ್ಕೆ ತೀವ್ರ ಮುಜುಗರ
ಬೆಂಗಳೂರು: ಪರಪ್ಪಾನ ಅಗ್ರಹಾರ ಜೈಲಿನಲ್ಲಿ ಕೊಲೆ ಆರೋಪಿ ನಟ ದರ್ಶನ್ ಮತ್ತು ಗ್ಯಾಂಗ್‌ಗೆ ರಾಜಾತಿಥ್ಯ ಸಿಗುತ್ತಿರುವ ವಿಚಾರ ಬಯಲಾದ ಬಳಿಕ ತೀವ್ರ ಮುಜುಗರ ಅನುಭವಿಸುತ್ತಿರುವ ಸರಕಾರ ಅವರನ್ನೀಗ ಬೆಳಗಾವಿಯ ಹಿಂಡಲಗಾ ಜೈಲಿಗೆ ಸ್ಥಳಾಂತರಿಸಲು ಚಿಂತನೆ ನಡೆಸಿದೆ.
ಬಹುತೇಕ ಇಂದೇ ದರ್ಶನ್ ಮತ್ತು ಗ್ಯಾಂಗ್ ಹಿಂಡಲಗಾ ಜೈಲಿಗೆ ಸ್ಥಳಾಂತರವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ದರ್ಶನ್ ಮತ್ತು ಗ್ಯಾಂಗನ್ನು ಬೇರೆ ಜೈಲಿಗೆ ಶಿಫ್ಟ್ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಸೂಚನೆ ಕೊಟ್ಟಿದ್ದಾರೆ. ದರ್ಶನ್‌ಗೆ ವಿಶೇಷ ಸೌಲಭ್ಯ ಒದಗಿಸಿಕೊಟ್ಟ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲಿನ 9 ಅಧಿಕಾರಿಗಳನ್ನು ಈಗಾಗಲೇ ಅಮಾನತುಗೊಳಿಸಲಾಗಿದೆ.
ದರ್ಶನ್ ಪರಪ್ಪನ ಅಗ್ರಹಾರದಲ್ಲಿ ಆರಾಮವಾಗಿ ದಿನ ಕಳೆಯುತ್ತಿರುವುದು ಮೊನ್ನೆ ಬಯಲಾದ ಫೊಟೊ ಮತ್ತು ವೀಡಿಯೊದಿಂದಾಗಿ ಜಗಜ್ಜಾಹೀರಾಗಿದೆ. ಕುಖ್ಯಾತ ರೌಡಿಗಳ ಜೊತೆಗೆ ದರ್ಶನ್ ಜೈಲಿನೊಳಗೆ ಕಾಫಿ ಕುಡಿಯುತ್ತಾ, ಸಿಗರೇಟ್ ಸೇದುತ್ತಾ ಇರುವ ಫೋಟೊ ಸಂಚಲನ ಸೃಷ್ಟಿಸಿ ಸರಕಾರ ಸಿಕ್ಕಾಪಟ್ಟೆ ಟೀಕೆಗೆ ಗುರಿಯಾಗಿದೆ. ಹೀಗಾಗಿ ನಟೋರಿಯಸ್ ಹಿಂಡಲಗಾ ಜೈಲಿನ `ಅಂಧೇರಾ’ ಸೆಲ್‌ಗಳಿಗೆ ದರ್ಶನ್ ಮತ್ತು ಗ್ಯಾಂಗ್ ಸ್ಥಳಾಂತರವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ರಾಜ್ಯದಲ್ಲಿ ಅಪರಾಧಿಗಳನ್ನು ಗಲ್ಲಿಗೇರಿಸುವುದು ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಮಾತ್ರ. ನಟೋರಿಯಸ್ ಕೈದಿಗಳನ್ನು ಇಡಲು 36 ಕತ್ತಲು ಕೋಣೆಯ ವ್ಯವಸ್ಥೆ ಬೆಳಗಾವಿ ಜೈಲಿನಲ್ಲಿದೆ. ಅದರಲ್ಲಿ 15 ಕೋಣೆಗಳು ಖಾಲಿ ಇವೆ. ಇವುಗಳನ್ನು ಅಂಧೇರಾ ಸೆಲ್‌ಗಳು ಎನ್ನುತ್ತಾರೆ. ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಭೂಗತ ಪಾತಕಿ ಬನ್ನಂಜೆ ರಾಜಾ, ದಂಡುಪಾಳ್ಯ ಗ್ಯಾಂಗ್, ವೀರಪ್ಪನ್ ಸಹಚರರು, ಸಯನೈಡ್ ಮಲ್ಲಿಕಾ, ಬಳ್ಳಾರಿ ನಾಗ, ಮಾಜಿ ಸಚಿವ ವಿನಯ್ ಕುಲಕರ್ಣಿ ಸೇರಿ ಹಲವರು ಸೆರೆವಾಸ ಅನುಭವಿಸಿದ್ದಾರೆ.
ಹಿಂಡಲಗಾ ಜೈಲಿಗೆ ದರ್ಶನ್ ಅಥವಾ ಗ್ಯಾಂಗ್ ಶಿಫ್ಟ್ ಮಾಡುವ ಸಾಧಕಬಾಧಕದಳ ಕುರಿತು ಮಾಹಿತಿ ಸಂಗ್ರಹಿಸಲಾಗಿದೆ. ಜೈಲಿನ ಸೆಕ್ಯುರಿಟಿ ಕುರಿತು ಕೂಡ ಮಾಹಿತಿ ಪಡೆದುಕೊಳ್ಳಲಾಗಿದೆ.