ಪುತ್ತೂರು: ಅಡಕೆಗೆ ಕೆಲವೊಂದು ಸವಾಲುಗಳಿದ್ದು, ಹಳದಿ ರೋಗ, ಎಲೆಚುಕ್ಕಿ ರೋಗ ಬಂದಿರುವುದು ಸಮಸ್ಯೆಯಾಗಿದೆ ಕಾಡಿದೆ. ಈ ಸಮಸ್ಯೆಗಳನ್ನು ಹೋಗಲಾಡಿಸಲು ಈ ಬಾರಿಯ ಬಜೆಟಿನಲ್ಲಿ ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿ ಭರವಸೆ ನೀಡಿದರು.
ತೆಂಕಿಲ ವಿವೇಕಾನಂದ ಶಾಲಾ ಆವರಣದಲ್ಲಿ ನಡೆದ ಕ್ಯಾಂಪ್ಕೋ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರಸ್ತುತ 6 ಲಕ್ಷ 11 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ಬೆಳೆಯಲಾಗುತ್ತಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಅಡಿಕೆ ಬೆಳೆಯುತ್ತಿದ್ದು, ಸಮಸ್ಯೆಗಳು ಅಷ್ಟೇ ಇದೆ. ಇದನ್ನು ಹೋಗಲಾಡಿಸಲು ಸರಕಾರ ಬದ್ಧವಾಗಿದೆ ಎಂದರು.
ಕ್ಯಾಂಪ್ಕೋ ಸಂಸ್ಥೆ ಒಂದು ಯಶೋಗಾಥೆಯ ಸಂಸ್ಥೆ. ಜನರಿಂದ ಜನರಿಗಾಗಿ ಹುಟ್ಟಿದ ಕ್ಯಾಂಪ್ಕೋ ಸಂಸ್ಥೆ 50 ವರ್ಷಗಳಲ್ಲಿ ಆರ್ಥಿಕ ಸಂಸ್ಥೆಯಾಗಿ ಇಂದು ಯಶಸ್ವಿಯತ್ತ ಸಾಗುತ್ತಿದೆ. ವಾರ್ಷಿಕ 26 ಸಾವಿರ ಟನ್ ಚಾಕಲೇಟ್ ಉತ್ಪಾದಿಸಿ ಸಹಕಾರ ಕ್ಷೇತ್ರವಾಗಿ ಬೆಳೆದು ಬಂದಿರುವುದು ಅಭಿನಂದನೀಯ ಎಂದರು.
ಒಂದು ಕಡೆ ಬಂಡವಾಳಶಾಹಿ ಮತ್ತೊಂದು ಕಡೆ ಕಮ್ಯುನಿಷಂ. ಈ ಎರಡಕ್ಕೂ ಅಮಿತ್ ಶಾ ಅವರು ಉತ್ತರ ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸಹಕಾರ ಕ್ಷೇತ್ರ ದೇಶದ ಅಭಿವೃದ್ಧಿ ವಿಚಾರದಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದರು.