ಪುತ್ತೂರು: ಜೀವನದಲ್ಲಿ ನಾವು ನಾವು ಮಾಡುವ ಕೆಲಸವನ್ನು ಪ್ರಮಾಣಿಕವಾಗಿ ಪ್ರೀತಿಸಿ ಅದರ ಬಗ್ಗೆ ಅಭಿರುಚಿಯನ್ನು ಬೆಳೆಸಿಕೊಳ್ಳಬೇಕು. ಆಗ ನಮ್ಮ ಗುರಿ ತಲುಪಲು ಸಾಧ್ಯ ಎಂದು ಪುತ್ತೂರು ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್, ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಹಿರಿಯ ವಿದ್ಯಾರ್ಥಿ ಕನಿಷ್ಕ ಎಸ್. ಚಂದ್ರ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ 2023-24 ನೇ ಸಾಲಿನಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯವು ನಡೆಸಿದ ಇಂಜಿನಿಯರಿಂಗ್ ವಿಭಾಗಗಳ ಅಂತಿಮ ವರ್ಷದ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಪದವೀಧರರಾದ ಅರ್ಹ ವಿದ್ಯಾರ್ಥಿಗಳ ಪದವಿ ಪ್ರದಾನ ಕಾರ್ಯಕ್ರಮ ಸಮಾವರ್ತನ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತಾಡಿದರು.
ನಿಮ್ಮ ಇದುವರೆಗಿನ ಓದು ಸೀಮಿತ ಅವಧಿಯ ನಿರ್ಧಿಷ್ಟ ವಿಷಯದ ಮೇಲಿನ ಪ್ರಶ್ನೆಗಳನ್ನು ಉತ್ತರಿಸುವುದು ಆಗಿತ್ತು. ಆದರೆ ಜೀವನದಲ್ಲಿ ಹಾಗಲ್ಲ ಹೆಜ್ಜೆ ಹೆಜ್ಜೆಗೂ ಎದುರಾಗುವ ಸಮಸ್ಯೆಗಳನ್ನು ಪರಿಹರಿಸುತ್ತಾ ಮುಂದುವರಿಯಬೇಕು. ಅದಕ್ಕಾಗಿ ಸವಾಲುಗಳನ್ನು ಮೆಟ್ಟಿ ನಿಲ್ಲುವ ಛಾತಿಯನ್ನು ಬೆಳೆಸಿಕೊಳ್ಳಬೇಕು ಎಂದರು.
ಕಾಲೇಜು ಆಡಳಿತ ಮಂಡಳಿ ನಿರ್ದೇಶಕ ರವಿಕೃಷ್ಣ.ಡಿ.ಕಲ್ಲಾಜೆ ಅಧ್ಯಕ್ಷತೆ ವಹಿಸಿ ಮಾತನಾಡಿ, ನೀವು ಗಳಿಸಿರುವ ಪದವಿ ನಿಮ್ಮ ಆತ್ಮವಿಶ್ವಾಸದ ಮಟ್ಟವನ್ನು ಹೆಚ್ಚಿಸಿರುತ್ತದೆ. ಈ ಪದವಿ ಅವಕಾಶಗಳ ಬಾಗಿಲನ್ನು ತೆರೆಯುವ ಕೀಲಿಕೈ ಮಾತ್ರ. ದೊರೆತ ಅವಕಾಶಗಳನ್ನು ಉಳಿಸಿ ಜೀವನದಲ್ಲಿ ಹೆಚ್ಚಿನದ್ದನ್ನು ಸಾಧಿಸುವ ಗುರಿ ನಿಮ್ಮದಾಗಬೇಕು ಎಂದರು.
ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ 3 ನೇ ರ್‍ಯಾಂಕ್ ಗಳಿಸಿದ ಕೇಶವ ಪ್ರಜ್ವಲ್.ಪಿ ಹಾಗೂ 5ನೇ ರ್‍ಯಾಂಕ್ ಗಳಿಸಿರುವ ಕೆ.ಪಲ್ಲವಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಅಲ್ಲದೆ ಪ್ರತಿ ವಿಭಾಗದಲ್ಲಿ ಶೈಕ್ಷಣಿಕವಾಗಿ ಉನ್ನತ ಸಾಧನೆಯನ್ನು ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ವಿಶ್ವಾಸ್ ಶೆಣೈ, ಸಂಚಾಲಕ ಸುಬ್ರಮಣ್ಯ ಭಟ್.ಟಿ.ಎಸ್., ಕೋಶಾಧಿಕಾರಿ ಮುರಳೀಧರ ಭಟ್ ಬಂಗಾರಡ್ಕ, ನಿರ್ದೇಶಕ ಸತ್ಯನಾರಾಯಣ ಭಟ್, ಪ್ರಾಂಶುಪಾಲ ಡಾ.ಮಹೇಶ್‌ಪ್ರಸನ್ನ.ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಾಂಶುಪಾಲ ಡಾ.ಮಹೇಶ್‌ಪ್ರಸನ್ನ.ಕೆ ಸ್ವಾಗತಿಸಿದರು. ಪ್ರೊ.ರೂಪಾ.ಜಿ.ಕೆ ಪ್ರಮಾಣವಚನ ಬೋಧಿಸಿದರು. ಡಾ.ದೀಪಕ್.ಕೆ.ಬಿ ಅತಿಥಿಗಳನ್ನು ಪರಿಚಯಿಸಿದರು. ಪ್ರೊ. ಪ್ರಶಾಂತ ವಂದಿಸಿದರು. ಪ್ರೊ.ನಿಶಾ.ಜಿ.ಆರ್, ಪ್ರೊ.ನೀಮಾ ಕಾರ್ಯಕ್ರಮ ನಿರ್ವಹಿಸಿದರು.