ಢಾಕಾ: ಆಂತರಿಕ ದಂಗೆಯಿಂದ ತತ್ತರಿಸಿರುವ ಬಾಂಗ್ಲಾದೇಶದಲ್ಲಿ ಶಾಂತಿ ನೆಲೆಯಾಯಿತು ಎನ್ನುವಷ್ಟರಲ್ಲಿ ಮತ್ತೆ ಹಿಂಸಾಚಾರ ಶುರುವಾಗಿದೆ. ರಾಜಧಾನಿ ಢಾಕಾದಲ್ಲಿ ನಿನ್ನೆ ರಾತ್ರಿಯಿಂದೀಚೆಗೆ ಹಿಂಸಾಚಾರ ನಡೆಯುತ್ತಿದ್ದು, ಸುಮಾರು 100 ಮಂದಿ ಗಾಯಗೊಂಡಿದ್ದಾರೆ. ಢಾಕಾದಲ್ಲಿರುವ ಆಡಳಿತ ಸೌಧ ಸೆಕ್ರೆಟರಿಯೇಟ್ ಬಳಿ ಭಾನುವಾರ ರಾತ್ರಿ ವಿದ್ಯಾರ್ಥಿಗಳು ಮತ್ತು ಅನ್ಸಾರ್ ಸದಸ್ಯರ ನಡುವೆ ಹಿಂಸಾತ್ಮಕ ಘರ್ಷಣೆಗಳು ಸಂಭವಿಸಿವೆ.
ರಾತ್ರಿ ಘರ್ಷಣೆ ಆರಂಭವಾಗಿದ್ದು, ಎರಡೂ ಕಡೆಯಲ್ಲಿ ಪ್ರತಿಭಟನೆಕಾರರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಅನ್ಸಾರ್ ಸದಸ್ಯರು ನಿರಂಕುಶ ಪ್ರಭುತ್ವದ ಏಜೆಂಟ್‌ಗಳು ಎಂದು ವಿದ್ಯಾರ್ಥಿಗಳು ಕರೆದಿದ್ದಾರೆ. ಬಾಂಗ್ಲಾದೇಶದಲ್ಲಿ ಆಂತರಿಕ ಭದ್ರತೆ ನೀಡುತ್ತಿರುವ ಅನ್ಸಾರ್ ಸದಸ್ಯರು ತಮ್ಮ ಉದ್ಯೋಗವನ್ನು ರಾಷ್ಟ್ರೀಕರಣಗೊಳಿಸಬೇಕೆಂದು ಕೆಲ ತಿಂಗಳಿನಿಂದ ಬೇಡಿಕೆ ಇಟ್ಟಿದ್ದಾರೆ. ಈ ಬೇಡಿಕೆ ಸಂಬಂಧ ಸಭೆ ನಡೆಯುತ್ತಿರುವಾಗ ಹಿಂಸಾಚಾರ ನಡೆದಿದೆ.
ಬಾಂಗ್ಲಾದೇಶದಲ್ಲಿ ಸುಮಾರು 60 ಲಕ್ಷ ಅನ್ಸಾರ್ ಸದಸ್ಯರಿದ್ದಾರೆ. ಇವರು ದೇಶದ ಒಳಗೆ ಕಾನೂನು ಸುವ್ಯವಸ್ಥೆಯನ್ನು ನೋಡಿಕೊಳ್ಳುತ್ತಾರೆ. ಈ ಅನ್ಸಾರ್ ಸದಸ್ಯರು ಶೇಖ್ ಹಸೀನಾ ಅವರ ಅವಾಮಿ ಲೀಗ್‌ನ ಏಜೆಂಟರು. ಶೇಖ್ ಹಸೀನಾ ಅಣತಿಯಂತೆ ನಮ್ಮ ಮೇಲೆ ಇವರಿಂದ ಹಲ್ಲೆ ನಡೆದಿದೆ ಎಂದು ವಿದ್ಯಾರ್ಥಿಗಳು ದೂರುತ್ತಿದ್ದಾರೆ.
ಭಾನುವಾರ ರಾತ್ರಿ 8:35ಕ್ಕೆ ವಿದ್ಯಾರ್ಥಿ ಆಂದೋಲನದ ಸಂಯೋಜಕ ಹಸ್ನತ್ ಢಾಕಾ ವಿಶ್ವವಿದ್ಯಾಲಯದ ರಾಜು ಸ್ಮಾರಕ ಶಿಲ್ಪಕಲೆ ಬಳಿ ಜಮಾಯಿಸುವಂತೆ ಫೇಸ್‌ಬುಕ್ ಪೋಸ್ಟ್ ಮೂಲಕ ಕೇಳಿಕೊಂಡಿದ್ದಾರೆ. ಅನ್ಸಾರ್ ಸದಸ್ಯರ ಹಲವು ಬೇಡಿಕೆಗಳನ್ನು ಈಡೇರಿಸಿದರೂ ಅವರು ನಮ್ಮ ಸದಸ್ಯರನ್ನು ಸೆಕ್ರೆಟರಿಯೇಟ್‌ನಲ್ಲಿ ವಶದಲ್ಲಿ ಇರಿಸಿದ್ದಾರೆ ಎಂದು ಪೋಸ್ಟ್ ಹಾಕಿದ್ದರು. ಈ ಪೋಸ್ಟ್ ನೋಡಿ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಜಮಾವಣೆಯಾಗಿದ್ದರಿಂದ ಮತ್ತೆ ಘರ್ಷಣೆ ನಡೆದಿದೆ.
ಬಾಂಗ್ಲಾದೇಶದಲ್ಲಿ ಮೊದಲ ಹಂತದಲ್ಲಿ ನಡೆದ ದಂಗೆಯಲ್ಲಿ 500ಕ್ಕೂ ಹೆಚ್ಚ ಮಂದಿ ಸಾವಿಗಿಡಾಗಿದ್ದು, ಪ್ರಧಾನಿ ಶೇಖ್ ಹಸೀನಾ ಪದಚ್ಯುತರಾಗಿ ಭಾರತಕ್ಕೆ ಪಲಾಯನ ಮಾಡುವುದರೊಂದಿಗೆ ಒಂದು ಹಂತಕ್ಕೆ ದಂಗೆ ಶಾಂತವಾಗಿತ್ತು. ಅಲ್ಲೀಗ ತಾತ್ಕಾಲಿಕ ನೆಲೆಯ ಸರಕಾರ ಆಡಳಿತ ನಡೆಸುತ್ತಿದೆ.