ಬೆಂಗಳೂರು: ಕೊಲೆ ಆರೋಪಿ ನಟ ದರ್ಶನ್‌ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನೀಡುತ್ತಿರುವ ಕುರಿತು ಅಧಿಕಾರಿಗಳ ವಿರುದ್ಧ ಕೆಂಡಾಮಂಡಲವಾಗಿರುವ ಗೃಹ ಸಚಿವ ಜಿ.ಪರಮೇಶ್ವರ್ ತಕ್ಷಣ ತನಿಖೆ ನಡೆಸಿ ವರದಿ ನೀಡಲು ಆದೇಶಿಸಿದ್ದಾರೆ. ದರ್ಶನ್ ಇತರ ಕೈದಿಗಳ ಜತೆ ಹೊರಗೆ ಕಾಫಿ ಕುಡಿಯುತ್ತಾ, ಸಿಗರೇಟ್ ಸೇದುತ್ತಾ ನಗುನಗುತ್ತಾ ಹರಟೆ ಹೊಡೆಯುತ್ತಿರುವ ಫೋಟೊ ನಿನ್ನೆಯಿಂದ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಕೊಲೆ ಮಾಡಿ ಜೈಲಿನಲ್ಲಿದ್ದರೂ ದರ್ಶನ್‌ಗೆ ಪಶ್ಚಾತ್ತಾಪ ಒಂದಿನಿತೂ ಇಲ್ಲ ಎಂಬ ವಿಷಯ ನಿನ್ನೆಯಿಂದ ಚರ್ಚೆಯಾಗಿತ್ತು.
ದರ್ಶನ್ ಜೈಲಿನಲ್ಲಿ ವಿಲ್ಸನ್ ಗಾರ್ಡನ್ ನಾಗ, ಮ್ಯಾನೇಜರ್ ನಾಗರಾಜ್ ಒಟ್ಟಿಗೆ ಹೊರಗೆ ಕುರ್ಚಿ ಟೇಬಲ್ ಹಾಕಿಕೊಂಡು ಕಾಫಿ ಕುಡಿಯುತ್ತಿರುವ ಫೋಟೊ ನಿನ್ನೆ ಸೋರಿಕೆಯಾಗಿದೆ. ದರ್ಶನ್ ಕೈಯಲ್ಲಿ ಸಿಗರೇಟ್ ಕೂಡ ಇರುವುದು ಜೈಲಲ್ಲಿ ರಾಜಾತಿಥ್ಯ ಸಿಗುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಈ ಫೋಟೊ ವೈರಲ್ ಆದ ಬಳಿಕ ಸರಕಾರ ಬಹಳ ಮುಜುಗರ ಅನುಭವಿಸುತ್ತಿದೆ. ಯಾರೋ ಫೋಟೊವನ್ನು ವೈರಲ್ ಮಾಡಿದ್ದಾರೆ. ಇದರಿಂದ ದರ್ಶನ್‌ಗೆ ಜೈಲಿನಲ್ಲಿ ರಾಜಾತಿಥ್ಯ ಸಿಗುತ್ತಿದೆಯೇ ಎನ್ನುವ ಪ್ರಶ್ನೆ ಮೂಡಿದೆ. ಈ ವಿಚಾರವಾಗಿ ಬಂಧೀಖಾನೆ ಡಿಜಿ ಮಾಲಿನಿ ಕೃಷ್ಣಮೂರ್ತಿ ಜೊತೆ ಗೃಹ ಸಚಿವ ಪರಮೇಶ್ವರ್ ಚರ್ಚೆ ಮಾಡಿ ಆಂತರಿಕ ತನಿಖೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ.
ಜೈಲಿನಲ್ಲಿ ದರ್ಶನ್‌ಗೆ ಮೊಬೈಲ್ ಬಳಕೆಗೂ ಅವಕಾಶ ಸಿಗುತ್ತಿದೆ. ಅವರು ಸಹ ಕೈದಿಯ ಮೊಬೈಲ್ನಿಂದ ಇತರ ರೌಡಿಶೀಟರ್ ಕುಟುಂಬದವರಿಗೆ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದಾರೆ. ಈ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ದರ್ಶನ್‌ಗೆ ಪಶ್ಚಾತಾಪ ಇದೆ ಎಂದೆಲ್ಲ ಹೇಳಲಾಗಿತ್ತು. ಆದರೆ, ಅವರಿಗೆ ಆ ರೀತಿಯ ಯಾವುದೇ ಭಾವನೆ ಇದ್ದಂತೆ ಇಲ್ಲ. ಅವರು ಹಾಯಾಗಿಯೇ ಜೈಲಿನಲ್ಲಿ ಸಮಯ ಕಳೆಯುತ್ತಿದ್ದಾರೆ.