ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೂ ಚಿಂತನೆ
ಬೆಂಗಳೂರು: ಸಂಪುಟದಲ್ಲಿರುವ ಕೆಲವು ನಿಷ್ಕ್ರಿಯ ಸಚಿವರನ್ನು ಕೈಬಿಟ್ಟು ಹೊಸಬರನ್ನು ಸೇರ್ಪಡೆಗೊಳಸುವ ಕುರಿತು ಚಿಂತನೆ ನಡೆದಿದೆ ಎಂದು ಮೂಲವೊಂದು ತಿಳಿಸಿದೆ. ಶುಕ್ರವಾರ ಹೈಕಮಾಂಡ್ ಭೇಟಿ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂಪುಟಕ್ಕೆ ಸರ್ಜರಿ ಮಾಡುವ ವಿಷಯವನ್ನೂ ಪ್ರಸ್ತಾಪಿಸಿದ್ದಾರೆ. ಈ ವೇಳೆ ಸದ್ಯ ವಿವಾದ ತಣ್ಣಗಾಗಲಿ, ನಂತರ ಸಂಪುಟ ಪುನಾರಚನೆ ಬಗ್ಗೆ ಚರ್ಚಿಸುವ ಎಂದು ಹೈಕಮಾಂಡ್ ನಾಯಕರು ಹೇಳಿದ್ದಾರೆ ಎನ್ನಲಾಗಿದೆ.
ನಿಷ್ಕ್ರಿಯ ಮತ್ತು ಹೆಸರು ಕೆಡಿಸಿಕೊಂಡಿರುವ ಕೆಲವು ಸಚಿವರನ್ನು ಸಂಪುಟದಿಂದ ಕೈಬಿಡುವ ಬಗ್ಗೆ ಚರ್ಚೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಚರ್ಚಿಸಿಲು ಮತ್ತೊಮ್ಮೆ ದಿಲ್ಲಿಗೆ ಬರುವುದಾಗಿ ಹೇಳಿದ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಎರಡು ತಿಂಗಳ ಬಳಿಕ ಸಂಪುಟ ಪುನಾರಚನೆ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
5ರಿಂದ 6 ಮಂದಿ ಸಚಿವರನ್ನು ಕೈಬಿಡುವ ಚಿಂತನೆಯಲ್ಲಿ ಸಿದ್ದರಾಮಯ್ಯ ಇದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಲಾವಣೆ ಬಗ್ಗೆಯೂ ಸಂಪುಟ ಪುನಾರಚನೆ ವೇಳೆಯೇ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ. ಮುಡಾ ಹಗರಣದ ಸಂಕಷ್ಟದ ಮಧ್ಯೆಯೇ ಸಂಪುಟ ಪುನಾರಚನೆ ಬಗ್ಗೆ ಹೈಕಮಾಂಡ್ ನಾಯಕರ ಸಭೆಯಲ್ಲಿ ಪ್ರಸ್ತಾಪವಾಗಿದೆ. ಮುಡಾ ಸೈಟು ಹಂಚಿಕೆಯ ಅಕ್ರಮಕ್ಕೆ ಸಂಬಂಧಿಸಿದ ಆರೋಪ ನ್ಯಾಯಾಲಯದಲ್ಲಿದೆ. ಕೋರ್ಟ್ ತೀರ್ಮಾನ ನೋಡಿಕೊಂಡು ಮತ್ತೊಮ್ಮೆ ದಿಲ್ಲಿಗೆ ಬರುವುದಾಗಿ ಹೈಕಮಾಂಡ್ಗೆ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸದ್ಯ ಜಮ್ಮು-ಕಾಶ್ಮೀರ, ಹರ್ಯಾಣ ಚುನಾವಣೆಯಲ್ಲಿ ಹೈಕಮಾಂಡ್ ನಾಯಕರು ವ್ಯಸ್ತರಾಗಿದ್ದಾರೆ. ಹೀಗಾಗಿ ಚುನಾವಣೆ ಬಳಿಕ ಕರ್ನಾಟಕದ ಸಂಪುಟ ಪುನಾರಚನೆ ಬಗ್ಗೆ ಗಮನ ಹರಿಸಲಿದ್ದಾರೆ ಎನ್ನಲಾಗಿದೆ. ಸಂಪುಟ ಪುನಾರಚನೆ ವೇಳೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಚರ್ಚೆ ನಡೆಯಲಿದೆ. ಕೆಲವರು ಸಚಿವ ಸ್ಥಾನ ಬಿಟ್ಟು ಕೆಪಿಸಿಸಿ ಅಧ್ಯಕ್ಷ ಸ್ಥಾನ ಒಪ್ಪಲು ಸಿದ್ಧರಿಲ್ಲ. ಹೀಗಾಗಿ ಸಂಪುಟ ಪುನಾರಚನೆ ವೇಳೆಯೇ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆ ಮಾಡಲು ಹೈಕಮಾಂಡ್ ಚಿಂತನೆ ನಡೆಸಿದೆ ಎನ್ನಲಾಗಿದೆ.