ಹೊಸದಿಲ್ಲಿ : ಸಿದ್ದರಾಮಯ್ಯ ಮೇಲಿನ ದಾಳಿಯನ್ನು ಹಿಂದುಳಿದ ನಾಯಕರ ವಿರುದ್ಧ ನಡೆಸಿದ ಷಡ್ಯಂತ್ರ ಎನ್ನುವಂತೆ ಬಿಂಬಿಸಿ, ಬಿಜೆಪಿ ಏನೇ ಆರೋಪ ಮಾಡಲಿ ತಲೆ ಕೆಡಿಸಿಕೊಳ್ಳಬೇಡಿ. ಕಾನೂನು ಹೋರಾಟ ಮೂಲಕವೇ ಉತ್ತರ ನೀಡಿ ಎಂದು ರಾಜ್ಯದ ಕಾಂಗ್ರೆಸ್ ನಾಯಕರಿಗೆ ಕಾಂಗ್ರೆಸ್ ಹೈಕಮಾಂಡ್ ಸಲಹೆ ನೀಡಿದೆ.
ರಾಜ್ಯ ರಾಜಕೀಯದಲ್ಲಿ ಕೋಲಾಹಲ ಎಬ್ಬಿಸಿರುವ ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಸಿದ್ದರಾಮಯ್ಯ ಮತ್ತಿತರರು ಹೈಕಮಾಂಡ್ ಜೊತೆ ಸುದೀರ್ಘ ಸಭೆ ನಡೆಸಿದ್ದು, ಈ ಸಂದರ್ಭದಲ್ಲಿ ಹೈಕಮಾಂಡ್ ನಾಯಕರು ಸಿದ್ದರಾಮಯ್ಯಗೆ ಪೂರ್ಣ ಬೆಂಬಲ ಘೋಷಿಸಿದ್ದಾರೆ. ಪ್ರಾಸಿಕ್ಯೂಷನ್ ಪ್ರಹಸನದ ಬಗ್ಗೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಹೈಕಮಾಂಡ್‌ಗೆ ವಿವರಣೆ ನೀಡಿದ್ದಾರೆ.
ಸಂಪುಟ ಸಭೆಯ ನಿರ್ಣಯ, ಶಾಸಕಾಂಗ ಪಕ್ಷದ ಸಭೆ, ಮುಡಾ ವಿಚಾರದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ 100 ಪುಟಗಳ ವರದಿ ಸಲ್ಲಿಸಿದ್ದಾರೆ. ಎಲ್ಲವನ್ನೂ ಕೇಳಿದ ಹೈಕಮಾಂಡ್ ಸಿಎಂ ಸಿದ್ದರಾಮಯ್ಯ ಬೆಂಬಲಕ್ಕೆ ನಿಂತಿದೆ.
ಕಾನೂನು ಹೋರಾಟ ನಡೆಸಿ, ನಾವಿದ್ದೇವೆ ಎಂಬ ಸಂದೇಶವನ್ನು ಹೈಕಮಾಂಡ್ ನೀಡಿದೆ. ಗ್ಯಾರಂಟಿಗಳನ್ನು ನೋಡಿ ಬಿಜೆಪಿ-ಜೆಡಿಎಸ್ ಹೆದರಿದೆ. ರಾಜ್ಯಪಾಲರನ್ನು ಬಳಸಿ ಹಿಂದುಳಿದ ನಾಯಕನ ಮೇಲೆ ದಾಳಿ ನಡೆಸುವ ಯತ್ನ ಮಾಡುತ್ತಿದೆ ಎಂದು ನಂಬಿಸಲು ಸೂಚನೆ ನೀಡಿದೆ.
ಬಿಜೆಪಿ ಏನೇ ಆರೋಪ ಮಾಡಲಿ ತಲೆ ಕೆಡಿಸಿಕೊಳ್ಳಬೇಡಿ. ಪ್ರಕರಣ ಈಗ ಕಾನೂನು ವ್ಯಾಪ್ತಿಗೆ ಬಂದಿದೆ. ಕಾನೂನು ಹೋರಾಟದ ಮೂಲಕವೇ ಉತ್ತರ ನೀಡಿ. ಹೈಕೋರ್ಟ್ ಆಗಲಿ, ಸುಪ್ರೀಂ ಕೋರ್ಟ್ ಆಗಲಿ ಕಾನೂನು ಹೋರಾಟ ಮುಂದುವರಿಸಿ ಎಂದು ಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೂಚನೆ ನೀಡಿದ್ದಾರೆ.
ವಿಪಕ್ಷಗಳ ವಿಚಾರದಲ್ಲಿ ಮತ್ತಷ್ಟು ಅಗ್ರೆಸಿವ್ ಆಗಿ. ಗ್ಯಾರಂಟಿಯನ್ನೇ ಅಸ್ತ್ರ ಮಾಡಿಕೊಳ್ಳಿ. ಗ್ಯಾರಂಟಿ ಸಹಿಸದೆ ಬಿಜೆಪಿ ಸಿಎಂ ವಿರುದ್ಧ ಆರೋಪ ಮಾಡುತ್ತಿದೆ ಎಂದು ಹೇಳಿ. ಹೆಜ್ಜೆ ಹೆಜ್ಜೆಗೂ ರಾಜ್ಯಪಾಲರ ನಡೆ ಖಂಡಿಸಿ ಬಿಜೆಪಿ-ಜೆಡಿಎಸ್ ಮಾಡಿದ ಹೋರಾಟಗಳನ್ನು ಹೊರತನ್ನಿ. ಮುಲಾಜಿಲ್ಲದೆ ಮಾತನಾಡಿ. ಅಗತ್ಯ ಎನಿಸಿದ ಪ್ರಕರಣದಲ್ಲಿ ತನಿಖೆಗೆ ನೀಡಿ. ಯಾವುದೇ ಕಾರಣಕ್ಕೂ ಸಿಎಂ ವಿರುದ್ಧ ಮಾತನಾಡುವಂತಿಲ್ಲ. ಸಿಎಂ ಬೆನ್ನಿಗೆ ನಿಲ್ಲಬೇಕು, ಸರ್ಕಾರ ಪಕ್ಷದಲ್ಲಿ ಗೊಂದಲ ಇಲ್ಲದೆ ಒಟ್ಟಾಗಿ ಹೋರಾಡಿ ಎಂದು ರಾಜ್ಯ ನಾಯಕರಿಗೆ ಸಲಹೆ ನೀಡಿದ್ದಾರೆ.
ರಾಷ್ಟ್ರಪತಿ ಬಳಿಗೆ ಹೋಗುವುದು ಮುಂದೆ ನಿರ್ಧರಿಸೋಣ. ರಾಷ್ಟ್ರಮಟ್ಟದಲ್ಲಿ ಇದು ಚರ್ಚೆಯಾಗಲಿದೆ. ಹೀಗಾಗಿ ಈ ಹೆಜ್ಜೆಯ ಬಗ್ಗೆ ನಾವು ಯೋಚಿಸಬೇಕಿದೆ ಎಂದು ತಿಳಿಸಿದ್ದಾರೆ.