ಪೇಪರ್ ಹಂಚುತ್ತಿದ್ದ ಹುಡುಗ ಜಿಲ್ಲಾಧಿಕಾರಿ ಆದ

ಆತ ಐದನೇ ವರ್ಷಕ್ಕೆ ಸರಿಯಾಗಿ ಅಪ್ಪನನ್ನು ಕಳೆದುಕೊಂಡಿದ್ದರು. ಅವರಿಗೆ ಐದು ಜನ ಸೋದರ, ಸೋದರಿಯರು. ಅವರನ್ನೆಲ್ಲ ಸಾಕಲು ಅವರ ಅಮ್ಮ ಯಾರ್ಯಾರದೋ ಮನೆಯಲ್ಲಿ ಪಾತ್ರೆ ಪಗಡಿಗಳನ್ನು ತೊಳೆಯಬೇಕಾಯಿತು. ಹಸಿವು ಮತ್ತು ಅಪಮಾನ ಬದುಕಿನ ಪಾಠ ಕಲಿಸಿತು.

13 ವರ್ಷ ಅನಾಥಾಶ್ರಮದಲ್ಲಿ ಕಳೆದವರು ನಾಸರ್

ಅಮ್ಮನಿಗೆ ಅವರನ್ನು ಸಾಕುವುದು ಕಷ್ಟ ಆದಾಗ ಮಗನನ್ನು ಒಂದು ಅನಾಥಾಶ್ರಮದಲ್ಲಿ ತಂದು ಬಿಟ್ಟರು. ಅಲ್ಲಿನ ಅರೆಹೊಟ್ಟೆಯ ಊಟ, ಅನಾರೋಗ್ಯಕರ ವಾತಾವರಣ ಮತ್ತು ಬೆವರು ಹರಿಸುವ ದುಡಿಮೆ ಅವರ ಸಂಗಾತಿಗಳು ಆದದ್ದು ಆಗ. ಅಲ್ಲಿನ ಹಿಂಸೆ ಅತಿಯಾದಾಗ ಅನಾಥಾಶ್ರಮ ಬಿಟ್ಟು ಓಡಿ ಹೋಗುವ ನೆನಪು ಅವರಿಗೆ ಆದದ್ದು ಉಂಟು. ರಾಗಿಂಗ್ ಕೂಡ ಜೋರಾಗಿತ್ತು. ಓಡಿ ಹೋಗೋಣ ಎಂದು ಅನ್ನಿಸಿದಾಗಲೆಲ್ಲ ಅಮ್ಮನ ಅಸಹಾಯಕತೆಯು ಕಣ್ಣ ಮುಂದೆ ಬಂದು ಕಣ್ಣೀರು ಗಲ್ಲವನ್ನು ತೋಯಿಸುತ್ತಿತ್ತು. ಆಗ ತನ್ನ ಶಿಕ್ಷಣದ ಖರ್ಚು ತಾನೇ ಭರಿಸಲು ಅವರು ನಿರ್ಧಾರ ಮಾಡುತ್ತಾರೆ.





























 
 

ಹೊಟ್ಟೆಪಾಡಿಗಾಗಿ ಹಲವೆಡೆಗಳಲ್ಲಿ ದುಡಿಮೆ

ಬಿಡುವಿನ ಅವಧಿಯಲ್ಲಿ ಪೇಪರ್ ಹಂಚುವ, ಬಸ್ಸುಗಳಲ್ಲಿ ಕ್ಲೀನರ್ ಆಗಿ ದುಡಿಯುವ, ಹೋಟೆಲುಗಳಲ್ಲಿ ಸಪ್ಲಾಯರ್ ಆಗಿ ದುಡಿಯುವ ಅವಕಾಶ ಅವರಿಗೆ ಒದಗಿತು. ತಲಶ್ಶೇರಿಯ ಪದವಿ ಕಾಲೇಜಿನಲ್ಲಿ ಓದುವಾಗ ತನಗಿಂತ ಕಿರಿಯ ವಿದ್ಯಾರ್ಥಿಗಳಿಗೆ ಟ್ಯೂಶನ್ ಕೊಡುವುದು, ಫೋನ್ ಆಪರೇಟರ್ ಮೊದಲಾದ ಉದ್ಯೋಗವನ್ನು ಮಾಡಿದರು.

ಕಲಿಕೆಯಲ್ಲಿ ಸಾಧಾರಣ ವಿದ್ಯಾರ್ಥಿ

ಅಬ್ದುಲ್ ನಾಸರ್ ಹೇಳುವ ಪ್ರಕಾರ ಅವರೊಬ್ಬ ಸಾಮಾನ್ಯರಲ್ಲಿ ಸಾಮಾನ್ಯ ಬುದ್ಧಿಮತ್ತೆಯ ವಿದ್ಯಾರ್ಥಿ. ಹೈಸ್ಕೂಲ್, ಪಿಯುಸಿ, ಪದವಿ ಎಲ್ಲ ಕಡೆಯೂ ಅವರಿಗೆ ದೊರೆತದ್ದು ಕೇವಲ ದ್ವಿತೀಯ ದರ್ಜೆ ಮಾತ್ರ. ಆದರೆ MSW ಮಾಡುವಾಗ ಅವರ ಅದ್ಭುತವಾದ ಪ್ರತಿಭೆ ಹೊರಬಂತು. ಅದರಲ್ಲಿ ಅವರಿಗೆ ಅತ್ಯುನ್ನತ ಶ್ರೇಣಿ ಫಲಿತಾಂಶ ಬಂತು. 1994ರಲ್ಲಿ ಕೇರಳ ಸರಕಾರದ ಆರೋಗ್ಯ ಇಲಾಖೆಯಲ್ಲಿ ಉದ್ಯೋಗಿ ಆಗಿ ಕೆಲಸಕ್ಕೆ ಸೇರಿದರು.

ಓದುವ ಹಸಿವು ಕಡಿಮೆ ಆಗಲಿಲ್ಲ

ಸರಕಾರಿ ಉದ್ಯೋಗಕ್ಕೆ ಸೇರಿದ ಕೂಡಲೇ ಅವರು ತನ್ನ ಅಮ್ಮನನ್ನು ಮನೆಕೆಲಸ ಬಿಡಿಸಿ ತನ್ನ ಕ್ವಾರ್ಟರ್ಸ್‌ಗೆ ಕರೆದುಕೊಂಡು ಬಂದರು. ಅಲ್ಲಿ ಅವರಿಗೆ ನೆಮ್ಮದಿಯ ಬದುಕು ದೊರೆಯಲು ಏನೆಲ್ಲ ಬೇಕೋ ಅದೆಲ್ಲವನ್ನೂ ಮಾಡಿಕೊಟ್ಟರು.

ವರ್ಷಕ್ಕೆ ಎರಡೆರಡು ಸ್ಪರ್ಧಾತ್ಮಕ ಪರೀಕ್ಷೆ ಬರೆದರು

ಈ ಕಡೆ ಅವರ ಓದುವ ಅಭ್ಯಾಸವು ತೀವ್ರವಾಗಿ ಹೆಚ್ಚಾಯಿತು. ರಸ್ತೆ ಬದಿಯಲ್ಲಿ ಅರ್ಧ ಬೆಲೆಗೆ ಮಾರಾಟ ಆಗುತ್ತಿದ್ದ ಪುಸ್ತಕಗಳನ್ನು ಆಯ್ದು ತಂದು ಓದಿದರು. ನಂತರ ಅವುಗಳನ್ನು ಅದೇ ರೇಟಿಗೆ ತನ್ನ ಗೆಳೆಯರಿಗೆ ಮಾರಿದರು. ವರ್ಷಕ್ಕೆ ಎರಡೆರಡು ಪರೀಕ್ಷೆಗಳನ್ನು ಬರೆದು ಬಡ್ತಿ ಪಡೆಯುತ್ತಾ ಮುಂದೆ ಹೋದರು. ಸಮರ್ಪಣಾ ಭಾವದಿಂದ ದುಡಿದು ಸರಕಾರದ ಮನ್ನಣೆ ಪಡೆದರು. 2015ರಲ್ಲಿ ಅವರು ಸ್ವಂತ ಸಾಮರ್ಥ್ಯದ ಮೇಲೆ ಡೆಪ್ಯುಟಿ ಕಲೆಕ್ಟರ್ ಹುದ್ದೆಗೆ ಏರಿದರು. 2019ರಲ್ಲಿ ಕೊಲ್ಲಂ ಜಿಲ್ಲೆಯ ಜಿಲ್ಲಾಧಿಕಾರಿ ಆಗಿ ಕೂಡ ಆಯ್ಕೆ ಆದರು. ಭ್ರಷ್ಟಾಚಾರ ಇಲ್ಲದ ಶುದ್ಧಾಂಗ ಅಧಿಕಾರವನ್ನು ಉಪಯೋಗ ಮಾಡಿ ಗೆದ್ದರು.

ತನ್ನ ಹುದ್ದೆಯನ್ನು ಪ್ರಭಾವಯುತವಾಗಿ ಬಳಕೆ ಮಾಡಿಕೊಂಡು ಜನರ ಸೇವೆ ಮಾಡಿದರು. ತನ್ನನ್ನು ಜನಸೇವೆಗೆ ಮುಡಿಪಾಗಿಟ್ಟರು.
ಅಬ್ದುಲ್ ನಾಸರ್ ಅವರ ಹೋರಾಟದ ಬದುಕು ಯಾರಿಗಾದರೂ ಸ್ಫೂರ್ತಿದಾಯಕ ಆಗಬಹುದು.

ರಾಜೇಂದ್ರ ಭಟ್ ಕೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top