ಹೊಸದಿಲ್ಲಿ: ಷೇರುಗಳನ್ನು ಮತ್ತು ಹಣವನ್ನು ಬೇರೊಂದು ಕಂಪನಿಗೆ ವರ್ಗಾಯಿಸಿ ವಂಚನೆ ಎಸಗಿದ ಆರೋಪ ಎದುರಿಸುತ್ತಿದ್ದ ಉದ್ಯಮಿ ಅನಿಲ್ ಅಂಬಾನಿಗೆ ಷೇರು ಮಾರುಕಟ್ಟೆ ನಿಯಂತ್ರಕ ವ್ಯವಸ್ಥೆ ಸೆಬಿ (SEBI) ದೊಡ್ಡದೊಂದು ಶಾಕ್ ನೀಡಿದೆ. ಅನಿಲ್ ಅಂಬಾನಿ ಅವರನ್ನು ಐದು ವರ್ಷಗಳ ಮಟ್ಟಿಗೆ ಷೇರು ಮಾರುಕಟ್ಟೆಯಿಂದಲೇ ಬ್ಯಾನ್ ಮಾಡಲಾಗಿದೆ. ಜತೆಗೆ 25 ಕೋಟಿ ರೂ. ದಂಡವನ್ನೂ ಸೆಬಿ ವಿಧಿಸಿದೆ.
ರಿಲಯನ್ಸ್ ಹೋಮ್ ಫೈನಾನ್ಸ್ನ (RIHL) ಕಂಪನಿಯಿಂದ ಹಣವನ್ನು ಬೇರೆಡೆಗೆ ವರ್ಗಾಯಿಸಿದ್ದಕ್ಕೆ ಕಂಪನಿಯ ಪ್ರಮುಖ ಅಧಿಕಾರಿಗಳು ಸೇರಿದಂತೆ ಅನಿಲ್ ಅಂಬಾನಿಗೆ ಸೇರಿದ 24 ಘಟಕಗಳ ಮೇಲೆ ಸೆಬಿ 5 ವರ್ಷ ನಿರ್ಬಂಧ ಹೇರಿದೆ. ಅಷ್ಟೇ ಅಲ್ಲದೇ ಆರ್ಐಎಚ್ಎಲ್ ಸಂಸ್ಥೆಯನ್ನು ಷೇರು ಮಾರುಕಟ್ಟೆಯಿಂದ 6 ತಿಂಗಳು ನಿರ್ಬಂಧಿಸಿ 6 ಲಕ್ಷ ರೂ. ದಂಡವನ್ನು ವಿಧಿಸಿದೆ.
ಷೇರು ಮಾರುಕಟ್ಟೆಯಲ್ಲಿ ವ್ಯವಹಾರ ಮಾಡುವ ಯಾವುದೇ ಕಂಪನಿಯಲ್ಲಿ ಯಾವುದೇ ರೀತಿಯಲ್ಲಿ ಅನಿಲ್ ಅಂಬಾನಿ ಶಾಮೀಲಾಗಿರಬಾರದು. ಯಾವುದೇ ಕಂಪನಿಯ ನಿರ್ದೇಶಕ ಮಂಡಳಿ ಅಥವಾ ಇನ್ನಿತರ ಪ್ರಮುಖ ಹುದ್ದೆಗಳನ್ನು ಹೊಂದಿರಬಾರದು ಎಂದು ಸೆಬಿ ಕಠಿಣ ನಿರ್ಬಂಧ ವಿಧಿಸಿದೆ.
ಆರ್ಎಚ್ಎಫ್ಎಲ್ನ ಪ್ರಮುಖ ವ್ಯವಸ್ಥಾಪಕ ಸಿಬ್ಬಂದಿ ನೆರವಿನಿಂದ ಅನಿಲ್ ಅಂಬಾನಿ ಕಂಪನಿಯ ಹಣವನ್ನು ತನ್ನ ಸಂಸ್ಥೆಗಳ ಸಾಲವನ್ನು ಮರೆಮಾಚುವ ಉದ್ದೇಶದಿಂದ ವರ್ಗಾಯಿಸುವ ವಂಚನೆಯ ಯೋಜನೆಯನ್ನು ರೂಪಿಸಿದ್ದು ತನಿಖೆಯಿಂದ ದೃಢಪಟ್ಟ ಹಿನ್ನೆಲೆಯಲ್ಲಿ ಸೆಬಿ ಇಂದು ಕಠಿಣ ಕ್ರಮವನ್ನು ಕೈಗೊಂಡಿದೆ.