ಸಮೀಕ್ಷೆಯಲ್ಲಿ ಬಂದಿದೆ ಅಚ್ಚರಿಯ ಫಲಿತಾಂಶ
ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಮುಂಬರುವ ಸೆ.17ರಂದು 75ರ ಹರೆಯಕ್ಕೆ ಪದಾರ್ಪಣೆ ಮಾಡಲಿದ್ದಾರೆ. ಉನ್ನತ ಹುದ್ದೆಯಲ್ಲಿರುವವರು 75 ವರ್ಷವಾದ ಬಳಿಕ ಸಕ್ರಿಯ ರಾಜಕಾರಣದಿಂದ ನಿರ್ಗಮಿಸಿ ಮಾರ್ಗದರ್ಶಕ ಮಂಡಲ ಸೇರುವುದು ಬಿಜೆಪಿಯಲ್ಲಿರುವ ಅಲಿಖಿತ ನಿಯಮ. ಈ ಹಿನ್ನೆಲೆಯಲ್ಲಿ ಮೋದಿಯವರು ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬ ಕುತೂಹಲ ಇಡೀ ದೇಶದಲ್ಲಿ ಇದೆ. ಆದರೆ ಸದ್ಯದ ರಾಜಕೀಯ ಪರಿಸ್ಥಿತಿಯನ್ನು ಅವಲೋಕಿಸುವಾಗ ಮೋದಿ ಪ್ರಧಾನಿ ಹುದ್ದೆ ಬಿಡುವ ಸಾಧ್ಯತೆ ಗೋಚರಿಸುತ್ತಿಲ್ಲ.
ಮೂರನೇ ಅವಧಿಯಲ್ಲಿ ತುಸು ಹಿನ್ನಡೆ ಅನುಭವಿಸಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಈಗ ಮಿತ್ರಪಕ್ಷಗಳನ್ನು ಅವಲಂಬಿಸಿಕೊಂಡು ಆಡಳಿತದಲ್ಲಿದೆ. ಈ ಪರಿಸ್ಥಿತಿಯಲ್ಲಿ ಸರ್ವಸಮ್ಮತವಾಗುವ ಮತ್ತು ಎಲ್ಲ ಪಕ್ಷಗಳನ್ನು ಸರಿದೂಗಿಸಿಕೊಂಡು ಹೋಗುವ ನಾಯಕನೊಬ್ಬನ ಅಗತ್ಯ ಬಿಜೆಪಿಗಿದೆ. ಸದ್ಯ ಅಂಥ ನಾಯಕರಾಗಿ ಕಾಣಿಸುತ್ತಿರುವದು ಮೋದಿ ಮಾತ್ರ. ಹೀಗಾಗಿ ಎನ್‌ಡಿಎ ಕೂಟದ ಮೂರನೇ ಅವಧಿಯುದ್ದಕ್ಕೂ ಮೋದಿಯೇ ಪ್ರಧಾನಿಯಾಗಿರುತ್ತಾರೆ ಎಂದೇ ಭಾವಿಸಲಾಗಿದೆ. ಆರ್‌ಎಸ್‌ಎಸ್ ಕೂಡ ಅವರನ್ನು ಈ ಪರಿಸ್ಥಿತಿಯಲ್ಲಿ ಬದಲಾಯಿಸಲು ಮುಂದಾಗಲಿಕ್ಕಿಲ್ಲ ಎನ್ನಲಾಗುತ್ತದೆ.
ಅದಾಗ್ಯೂ ಮೋದಿಯ ನಂತರ ಯಾರು ಎಂಬ ಪ್ರಶ್ನೆ ಬಿಜೆಪಿ ಮುಂದೆ ಸದಾ ಇರುತ್ತದೆ. ಈ ಹಿನ್ನೆಲೆಯಲ್ಲಿ ಆಂಗ್ಲ ವಾಹಿನಿಯೊಂದು ಮೋದಿಯ ನಂತರ ಯಾರು ಎಂದು ಸಮೀಕ್ಷೆಯೊಂದನ್ನು ನಡೆಸಿದಾಗ ತುಸು ಅಚ್ಚರಿಯಾಗುವ ಫಲಿತಾಂಶ ಬಂದಿದೆ. ದೇಶದ ಬಹುತೇಕ ಜನರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಮೋದಿಯ ಉತ್ತರಾಧಿಕಾರಿ ಎಂದು ನಂಬಿದೆ. ಆದರೆ ಮೂಡ್ ಅಫ್ ನೇಶನ್ ಸಮೀಕ್ಷೆಯಲ್ಲಿ ಮಾತ್ರ ಜನರು ಮತ ಹಾಕಿರುವುದು ಯೋಗಿಗಲ್ಲ ಬದಲಾಗಿ ಕೇಂದ್ರ ಗೃಹ ಸಚಿವ ಅಮಿ ಶಾ ಅವರಿಗೆ. ಮೋದಿ ನಂತರ ಬಿಜೆಪಿಯಲ್ಲಿ ಯಾರಾದರೂ ಪ್ರಧಾನಿಯಾಗುವುದಿದ್ದರೆ ಅದು ಅಮಿತ್ ಶಾ ಎಂಬುದು ದೇಶದ ಜನರ ಒಲವು ಎನ್ನುವುದು ಈ ಸಮೀಕ್ಷೆಯಲ್ಲಿ ವ್ಯಕ್ತವಾಗಿರುವ ಅಂಶ. ಅಮಿತ್ ಶಾ ನಂತರದ ಸ್ಥಾನದಲ್ಲಿ ಯೋಗಿ ಅದಿತ್ಯನಾಥ್ ಇದ್ದರೆ, ಕೊನೆಯ ಆಯ್ಕೆಯಾಗಿ ನಿತಿನ್ ಗಡ್ಕರಿ ಇದ್ದಾರೆ.
ಸದ್ಯಕ್ಕೇನೋ ಮೋದಿಯ ಸ್ಥಾನ ಭದ್ರ ಎಂದು ಕಾಣಿಸುತ್ತಿದ್ದರೂ ಒಂದು ಗೊಂಪು ಮಾತ್ರ ಅವರು ಅಧಿಕಾರ ತ್ಯಾಗ ಮಾಡಬೇಕೆಂದು ಬಯಸುತ್ತಿದೆ. ಈಗಾಗಲೇ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಪಕ್ಷದ ನಿಯಮದಂತೆ 75 ವರ್ಷ ಆದ ಕೂಡಲೇ ಮೋದಿ ಅಧಿಕಾರ ತ್ಯಾಗ ಮಾಡದಿದ್ದರೆ ಅವರನ್ನು ಬೇರೆ ವಿಧಾನದಿಂದ ಕೆಳಗಿಳಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.