ಮುಯ್ಯಿ ತೀರಿಸಲು ಬಿಜೆಪಿ ಕಾಲದ ಹಗರಣ ಕೆದಕುತ್ತಿರುವ ಕಾಂಗ್ರೆಸ್
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುಡಾ ಅವ್ಯವಹಾರದ ಆರೋಪ ಹೊರಿಸಿರುವ ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ಮುಯ್ಯಿ ತೀರಿಸಿಕೊಳ್ಳುವ ಸಲುವಾಗಿ ಕಾಂಗ್ರೆಸ್ ಹಳೆ ಹಗರಣಗಳನ್ನು ಕೆದಕುತ್ತಿದೆ. ಭೋವಿ ನಿಗಮದಲ್ಲಿ ಬಿಜೆಪಿ ಆಳ್ವಿಕೆ ಕಾಲದಲ್ಲಿ ಸಂಭವಿಸಿದೆ ಎನ್ನಲಾಗಿರುವ ಹಗರಣವೊಂದಕ್ಕೆ ಸಂಬಂಧಿಸಿ ಅಂದಿನ ನಿಗಮದ ಎಂಡಿಯ ಸಹೋದರಿಯನ್ನು ಸಿಐಡಿ ಪೊಲೀಸರು ನಿನ್ನೆ ಬಂಧಿಸಿದ್ದಾರೆ.
ಹಗರಣದಲ್ಲಿ ತನ್ನ ಸೋದರಿಯ ಬಹುಕೋಟಿ ಅವ್ಯವಹಾರದಲ್ಲಿ 2 ಕೋಟಿ ರು. ಹಣ ಸ್ವೀಕರಿಸಿದ ಆರೋಪ ಹೊತ್ತು ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕಿ ಆರ್.ಲೀಲಾವತಿ ಅವರ ಸೋದರಿ, ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)ಯ ಮಾಜಿ ಉದ್ಯೋಗಿ ಮಂಗಳಾ ಜೈಲು ಸೇರುವಂತಾಗಿದೆ.
ಜಾಲಹಳ್ಳಿ ನಿವಾಸಿ ಆರ್. ಮಂಗಳಾ ಅವರನ್ನು ರಾಜ್ಯ ಅಪರಾಧ ತನಿಖಾ ಇಲಾಖೆ (ಸಿಐಡಿ) ಬಂಧಿಸಿದ್ದು, ಬಿಜೆಪಿ ಕಾಲದ ಭೋವಿ ನಿಗಮದ ಹಗರಣದಲ್ಲಿ ಸಿಐಡಿ ನಡೆಸಿದ ಮತ್ತೊಂದು ಮಹತ್ವದ ಬೇಟೆ ಇದಾಗಿದೆ. ಕೆಲ ದಿನಗಳ ಹಿಂದಷ್ಟೇ ನಿಗಮದ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಕಚೇರಿಗಳ ಮೇಲೆ ದಿಢೀರ್ ದಾಳಿ ನಡೆಸಿ 100ಕ್ಕೂ ಹೆಚ್ಚಿನ ಕಡತಗಳನ್ನು ಸಿಐಡಿ ವಶಪಡಿಸಿಕೊಂಡಿತ್ತು.
ರಾಜ್ಯ ಭೋವಿ ನಿಗಮದಲ್ಲಿ ವ್ಯವಸ್ಥಾಪಕ ನಿರ್ದೇಶಕಿಯಾಗಿದ್ದ ತಮ್ಮ ಹಿರಿಯ ಸೋದರಿ ಲೀಲಾವತಿ ಪರವಾಗಿ 2 ಕೋಟಿ ರು. ಹಣವನ್ನು ಮಂಗಳಾ ಸ್ವೀಕರಿಸಿದ್ದ ಸಂಗತಿ ತನಿಖೆಯಲ್ಲಿ ಪತ್ತೆಯಾಗಿದೆ. ಈ ಮಾಹಿತಿ ಮೇರೆಗೆ ಅವರನ್ನು ಬಂಧಿಸಲಾಗಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.
ಮಲ್ಲೇಶ್ವರದ ಐಐಎಸ್‌ಸಿಯಲ್ಲಿ ಉನ್ನತ ಹುದ್ದೆಯಲ್ಲಿದ್ದ ಮಂಗಳಾ, ತಮ್ಮ ಕುಟುಂಬದ ಜತೆ ಜಾಲಹಳ್ಳಿಯಲ್ಲಿ ವಾಸವಾಗಿದ್ದಾರೆ. ಮಂಗಳಾ ಸೋದರಿಯರ ಪೈಕಿ ಹಿರಿಯ ಅಕ್ಕ ಆರ್. ಲೀಲಾವತಿ ಭೋವಿ ನಿಗಮದ ಎಂಡಿಯಾಗಿದ್ದರು. ಆ ವೇಳೆ ಸೋದರಿ ಹಣಕಾಸು ಅವ್ಯವಹಾರಗಳಿಗೆ ಮಂಗಳಾ ನೆರವಾಗಿದ್ದಾರೆ ಎನ್ನಲಾಗಿದೆ.
ಏನಿದು ಭೋವಿ ಹಗರಣ?
ಬಡ ಭೋವಿ ಉದ್ಯಮಿಗಳಿಗೆ ಭೋವಿ ನಿಗಮದಿಂದ ಸಾಲ ನೀಡುವ ಯೋಜನೆಯಲ್ಲಿ 2021, 2022ರಲ್ಲಿ ಅವ್ಯವಹಾರ ನಡೆದಿದೆ ಅಂದು ಆರೋಪಿಸಲಾಗಿದೆ. ಸಾಲ ನೀಡುವ ನೆಪದಲ್ಲಿ ನಕಲಿ ಕಂಪನಿಗಳಿಗೆ ಹಣ ಕಳುಹಿಸಿ, ಅಲ್ಲಿಂದ ಕಿಕ್‌ಬ್ಯಾಕ್ ತರಿಸಿಕೊಳ್ಳುತ್ತಿದ್ದರು ಎನ್ನಲಾಗಿದೆ. ಇತ್ತೀಚೆಗೆ ಭೋವಿ ನಿಗಮದ ಕಚೇರಿ ಅಧೀಕ್ಷಕ ಸುಬ್ಬಪ್ಪ ಬಂಧನವಾಗಿದ್ದು, ಲೀಲಾವತಿ ತಲೆಮರೆಸಿಕೊಂಡಿದ್ದಾರೆ.