ಹೊಸದಿಲ್ಲಿ: ಮಂಗಳೂರಿನ ಕುಕ್ಕರ್ ಸ್ಫೋಟ, ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಸೇರಿದಂತೆ ದೇಶದಲ್ಲಿ ನಡೆದಿರುವ ಅನೇಕ ಬಾಂಬ್‌ಸ್ಫೋಟ ಕೃತ್ಯಗಳಲ್ಲಿ ಶಾಮೀಲಾಗಿರುವ ಉಗ್ರರಿಗೆ ಸ್ಫೂರ್ತಿಯಾಗಿರುವ ವಿವಾದಿತ ಇಸ್ಲಾಮಿಕ್ ಬೋಧಕ ಜಾಕೀರ್ ನಾಯ್ಕ್‌ನನ್ನು ಸಾಕ್ಷ್ಯಾಧಾರ ಒದಗಿಸಿದರೆ ಭಾರತಕ್ಕೆ ಹಸ್ತಾಂತರಿಸುವ ಪ್ರಸ್ತಾವ ಪರಿಗಣಿಸಲು ಮಲೇಷ್ಯಾ ಒಪ್ಪಿದೆ.
ಸೂಕ್ತವಾದ ಸಾಕ್ಷ್ಯಾಧಾರ ಸಿಕ್ಕಿದರೆ ಜಾಕೀರ್ ನಾಯ್ಕ್‌ನನ್ನು ಹಸ್ತಾಂತರಿಸಬೇಕೆಂಬ ಭಾರತದ ಮನವಿಯನ್ನು ನಮ್ಮ ಸರ್ಕಾರ ಪರಿಗಣಿಸಬಹುದು ಎಂದು ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಹೇಳಿದ್ದಾರೆ.
2022ರಲ್ಲಿ ಪ್ರಧಾನಮಂತ್ರಿ ಹುದ್ದೆ ಸ್ವೀಕರಿಸಿದ ನಂತರ ಮೊದಲ ಬಾರಿಗೆ ಅನ್ವರ್ ಇಬ್ರಾಹಿಂ ಮೂರು ದಿನಗಳ ಭಾರತ ಪ್ರವಾಸ ಕೈಗೊಂಡಿದ್ದಾರೆ. ಮಂಗಳವಾರ ನಡೆದ ಸಭೆಯಲ್ಲಿ ಅನ್ವರ್ ಇಬ್ರಾಹಿಂ ಮುಂದೆ ಮಲೇಷ್ಯಾದಲ್ಲಿ ಆಶ್ರಯ ಪಡೆದಿರುವ ಜಾಕೀರ್ ನಾಯ್ಕ್‌ನನ್ನು ಹಸ್ತಾಂತರಿಸುವ ವಿಚಾರದ ಬಗ್ಗೆ ಚರ್ಚಿಸಲಾಗಿದೆ. ಇಂಡಿಯನ್ ಕೌನ್ಸಿಲ್ ಆಫ್ ವರ್ಲ್ಡ್ ಅಫೇರ್ಸ್‌ನಲ್ಲಿ ನಡೆದ ಅಧಿವೇಶನದಲ್ಲಿ ಝಾಕೀರ್ ನಾಯ್ಕ್ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ, ಈ ಸಮಸ್ಯೆ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧದ ಮೇಲೆ ಪರಿಣಾಮ ಬೀರದಿರಲಿ. ನಾವು ಭಯೋತ್ಪಾದನೆಯನ್ನು ಬೆಂಬಲಿಸುವುದಿಲ್ಲ. ಭಯೋತ್ಪಾದನೆಯ ವಿರುದ್ಧ ಈ ಹಲವು ವಿಷಯಗಳಲ್ಲಿ ನಾವು ಭಾರತದೊಂದಿಗೆ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಎಂದು ಅನ್ವರ್ ಇಬ್ರಾಹಿಂ ಉತ್ತರಿಸಿದ್ದಾರೆ.
ಅಕ್ರಮ ಹಣ ವರ್ಗಾವಣೆ ಮತ್ತು ದ್ವೇಷ ಭಾಷಣಗಳ ಮೂಲಕ ಉಗ್ರವಾದವನ್ನು ಪ್ರಚೋದಿಸುವ ಆರೋಪ ಜಾಕೀರ್ ನಾಯ್ಕ್ ಮೇಲಿದೆ. 2016ರಲ್ಲಿ ಭಾರತವನ್ನು ತೊರೆದಿರುವ ನಾಯ್ಕ್‌ಗೆ ಈ ಹಿಂದೆ ಮಲೇಷ್ಯಾದಲ್ಲಿದ್ದ ಮಹತೀರ್ ಮೊಹಮ್ಮದ್ ನೇತೃತ್ವದ ಸರ್ಕಾರ ಶಾಶ್ವತ ಪೌರತ್ವ ನೀಡಿದೆ.
ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಶಾರೀಕ್, ಜಾಕೀರ್ ನಾಯ್ಕ್ ಭಾಷಣದ ವಿಡಿಯೋದಿಂದ ಪ್ರಭಾವಿತನಾಗಿದ್ದ. ಈತ ಜಾಕೀರ್ ನಾಯ್ಕ್‌ನನ್ನು ʼದಿ ರಿಯಲ್ ಇನ್‌ಸ್ಪಿರೇಶನ್ʼ ಎಂದು ಸಂಬೋಧಿಸಿದ್ದ. ತನಿಖೆಯ ವೇಳೆ ಶಾರೀಕ್ ಮೊಬೈಲ್‌ನಲ್ಲಿ 50ಕ್ಕೂ ಹೆಚ್ಚು ಜಾಕೀರ್ ನಾಯ್ಕ್ ಭಾಷಣಗಳು ಲಭ್ಯವಾಗಿದ್ದವು.
ದ್ವೇಷ ಭಾಷಣ, ಭಯೋತ್ಪಾದನೆಗೆ ಪ್ರೇರಣೆ, ಹಣಕಾಸು ನೆರವು ಆರೋಪ ಹಿನ್ನೆಲೆಯಲ್ಲಿ ವಿವಾದಿತ ಧರ್ಮ ಪ್ರಚಾರಕ ಝಾಕೀರ್ ನಾಯ್ಕ್ ʼಪೀಸ್ ಟಿವಿʼಗೆ ಭಾರತ ನಿರ್ಬಂಧ ಹೇರಿದೆ. ಜಾಕೀರ್ ಭಾಷಣದಿಂದ ಪ್ರಚೋದಿತನಾಗಿದ್ದ ಐಸಿಸ್ ಉಗ್ರನೋರ್ವ 2016ರಲ್ಲಿ ಢಾಕಾದ ಮೇಲೆ ದಾಳಿ ಮಾಡಿದ್ದ. ಬಳಿಕ ಝಾಕೀರ್ ಮಲೇಷ್ಯಾಕ್ಕೆ ಪಲಾಯನ ಮಾಡಿದ್ದ.
ಯುವಕರನ್ನು ಇಸ್ಲಾಂಗೆ ಬಲವಂತವಾಗಿ ಮತಾಂತರ ಮಾಡುವುದಕ್ಕೆ ಪ್ರೋತ್ಸಾಹ, ಭಯೋತ್ಪಾದಕರನ್ನು ಹೊಗಳುವುದು, ಆತ್ಮಹತ್ಯಾ ಬಾಂಬ್ ದಾಳಿ ಸಮರ್ಥನೆ, ಹಿಂದೂಗಳು, ಹಿಂದೂ ದೇವರುಗಳು ಮತ್ತು ಇತರ ಧರ್ಮಗಳ ವಿರುದ್ಧ ಆಕ್ಷೇಪಾರ್ಹ ಕಾಮೆಂಟ್, ಇತರ ಧರ್ಮಗಳಿಗೆ ಅವಮಾನ ಮತ್ತಿತರ ಆರೋಪಗಳು ಜಾಕೀರ್ ನಾಯ್ಕ್ ಮೇಲಿದೆ. ಉಗ್ರರು ಅವನನ್ನು ತಮ್ಮ ಗುರುವೆಂದು ಭಾವಿಸುತ್ತಾರೆ.