ರಾಮಕುಂಜ : ದುಶ್ಚಟ ಮುಕ್ತ ಸಮಾಜ ನಿರ್ಮಾಣ ವಿದ್ಯಾರ್ಥಿಗಳಿಂದ ಮಾಡಲು ಸಾಧ್ಯವಿದೆ. ಕೂಡಿ ಹಾಕಿ ಶಿಕ್ಷಣ ಕೊಡುವ ಕಾಲ ಬದಲಾಗಿದೆ. ವಿದ್ಯಾರ್ಥಿಗಳು ಸಂವಿಧಾನಕ್ಕೆ ಬದ್ಧರಾಗಿ, ಗೌರವ ಕೊಡಬೇಕು ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಕಡಬ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಕಡಬ ತಾಲೂಕು ಇವುಗಳ ಆಶ್ರಯದಲ್ಲಿ ವಿದ್ಯಾರ್ಥಿ – ವಿದ್ಯಾರ್ಥಿಯನಿರಾಗಿ ನಡೆದ ತಾಲೂಕು ಮಟ್ಟದ ಸ್ವಾಸ್ಥ್ಯ ಸಂಕಲ್ಪ ಮಾಸಾಚರಣೆ 2024 ಇದರ ಸಮಾರೋಪ ಸಮಾರಂಭ ಹಾಗೂ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭ ಆ.20 ರಂದು ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ನಡೆಯಿತು.
ಸಮಾರೋಪ ಭಾಷಣ ಮಾಡಿದ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಟ್ರಸ್ಟ್ ಬೆಳ್ತಂಗಡಿ ಇದರ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿನ್ಸೆಂಟ್ ಪಾಯಸ್ ಅವರು, ಬದುಕು ಎಂಬುದು ಅತ್ಯಮೂಲ್ಯವಾದದ್ದು. ತಂದೆ, ತಾಯಿ, ಗುರುಗಳು ಆದರ್ಶವಾಗಿ ಬದುಕಬೇಕೆಂದು ಮಕ್ಕಳಿಗೆ ಸರಿಯಾದ ದಾರಿ ತೋರಿಸುತ್ತಾರೆ. ವಾಟ್ಸಪ್, ಟ್ವಿಟರ್ ಬದುಕು ರೂಪಿಸುತ್ತದೆ ಎಂಬ ಭ್ರಮೆಯಿಂದ ಹೊರಬರಬೇಕೆಂದು ಹೇಳಿದರು. ಜೀವನಕ್ಕೆ ಶಾಕ್ ಕೊಡುವ ದುಶ್ಚಟಗಳಿಂದ ದೂರವಿದ್ದು ಸದ್ಭಾವನೆ ಯಿಂದ ಹಾಗೂ ಸಕಾರಾತ್ಮಕ ಯೋಚನೆಯಿಂದ ವಿದ್ಯಾರ್ಥಿಗಳು ಬದುಕುವ ಬಗ್ಗೆ ಯೋಚನೆ ಮಾಡಬೇಕು. ಇನ್ನೊಬ್ಬರ ಅನುಕರಣೆ ಭವಿಷ್ಯ ರೂಪಿಸುವುದಿಲ್ಲ ಎಂದು ಹೇಳಿದರು.
ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಕಡಬ ತಾಲೂಕು ಅಧ್ಯಕ್ಷ ಮಹೇಶ್ ಕೆ ಸವಣೂರು ಅಧ್ಯಕ್ಷತೆ ವಹಿಸಿದ್ದರು. ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ ಸಂದರ್ಭೋಚಿತವಾಗಿ ಮಾತನಾಡಿದರು. ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ನೆಲ್ಯಾಡಿ ವಲಯ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್, ಗೋಳಿತ್ತೊಟ್ಟು ವಲಯ ಅಧ್ಯಕ್ಷ ನೋಣಯ್ಯ ಪೂಜಾರಿ ಅಂಬರ್ಜೆ, ಆಲಂಕಾರು ವಲಯ ಅಧ್ಯಕ್ಷ ಇಂದುಶೇಖರ ಶೆಟ್ಟಿ, ಸದಸ್ಯ ಲಕ್ಷ್ಮೀ ನಾರಾಯಣ ರಾವ್ ಆತೂರು, ರಾಮಕುಂಜ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಚೇತಾ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಇದರ ಗೋಳಿತ್ತೊಟ್ಟು ವಲಯ ಅಧ್ಯಕ್ಷ ಬಾಲಕೃಷ್ಣ ಅಲೆಕ್ಕಿ, ರಾಮಕುಂಜ ಪ ಪೂ ಕಾಲೇಜು ಪ್ರಾಂಶುಪಾಲ ಚಂದ್ರಶೇಖರ ಕೆ., ರಾಮಕುಂಜೇಶ್ವರ ಪ್ರೌಢಶಾಲೆ ಮುಖ್ಯಗುರು ಸತೀಶ್ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಧೂಮಪಾನ -ಮದ್ಯಪಾನ ಮಾದಕ ವ್ಯಸನ ಮುಕ್ತ ಸಮಾಜ ಎಂಬ ವಿಷಯದ ಮೇಲೆ ನಡೆದ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ ಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ನಿಲಿಷ್ಕಾ ಕೆ., ನೆಹರೂನಗರ ಪ್ರಥಮ, ಸಾತ್ವಿಕ್ ವಿ ಜೆ ಬಂದರಿಮಜಲು ಕಳೆಂಜ ಬೆಳ್ತಂಗಡಿ ದ್ವಿತೀಯ ಹಾಗೂ ಸೃಜನ್ ಆಚಾರ್ಯ ಕೊಳೆಗುಡ್ಡೆ ಹೆಬ್ರಿ ಕಾರ್ಕಳ ತ್ರತೀಯ ಬಹುಮಾನ ಪಡೆದುಕೊಂಡರು. ವಿಜೇತರಿಗೆ ಅನುಕ್ರಮವಾಗಿ 5 ಸಾವಿರ, 3 ಸಾವಿರ, 2 ಸಾವಿರ ನಗದು ಬಹುಮಾನ, ಪ್ರಶಸ್ತಿ ಪತ್ರ, ಸ್ಮರಣಿಕೆ, ಮಂಜುನಾಥ ಸ್ವಾಮಿಯ ಫೋಟೋ ನೀಡಿ ಗೌರವಿಸಲಾಯಿತು. ಈ ಸ್ಪರ್ಧೆಯಲ್ಲಿ ರಾಜ್ಯದ 60 ಸ್ಪರ್ಧಾ ಳುಗಳು ಭಾಗವಹಿಸಿದ್ದರು. ರಾಮಕುಂಜ ವಿದ್ಯಾಸಂಸ್ಥೆಯಿಂದ ಸ್ಪರ್ಧೆಯಲ್ಲಿ ಭಾಗವಹಿಸಿದ ಕಾಲೇಜು ವಿಭಾಗದ ಪುನೀತ್ ವಿ ಎಸ್ ವಳಕಡಮ, ಚರಣ್ ಮುಗುಳಿ ಹಿರೇಬಂಡಾಡಿ, ದಿಶ್ವಾಂತ್ ನಾಗನಕೋಡಿ ಹಿರೇಬಂಡಾಡಿ ಹಾಗೂ ಪ್ರೌಢ ಶಾಲಾ ವಿಭಾಗದ ವಂಶಿ ಪಿ ಏಣಿತ್ತಡ್ಕ ಅವರಿಗೆ ಅಭಿನಂದನಾ ಪತ್ರ ನೀಡಲಾಯಿತು. ಒಂದು ತಿಂಗಳು ನಡೆದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂಪನ್ಮೂಲ ವ್ಯಕ್ತಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಪ್ರಾಂಶುಪಾಲ ಚಂದ್ರಶೇಖರ ಕೆ ಅವರು ಸದ್ಭಾವನಾ ಪ್ರಮಾಣ ವಚನ ಬೋಧಿಸಿದರು. ಕಡಬ ತಾಲೂಕು ಯೋಜನಾಧಿಕಾರಿ ಮೇದಪ್ಪ ಗೌಡ ನಾವೂರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರಶೇಖರ ಕೆ ವಂದಿಸಿದರು. ಕಡಬ ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಶಿವಪ್ರಸಾದ್ ಮೈಲೇರಿ ನಿರೂಪಿಸಿದರು.