ಸವಣೂರು: ಪುತ್ತೂರಿನ ಸಮರ್ಪಣಾ ಚಾರಿಟೇಬ್’ಲ್ ಟ್ರಸ್ಟ್’ನ flagship ಕಾರ್ಯಕ್ರಮವಾದ ಶಿಷ್ಯ ವೇತನ (Scholarship) ವಿತರಣಾ ಕಾರ್ಯಕ್ರಮದ ಅಂಗವಾಗಿ ರಸಪ್ರಶ್ನೆ ಸ್ಪರ್ಧಾ ಕಾರ್ಯಕ್ರಮವು ಸವಣೂರಿನ ವಿದ್ಯಾರಶ್ಮಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.
ಸಮರ್ಪಣಾ ಚಾರಿಟೇಬ್’ಲ್ ಟ್ರಸ್ಟ್’ನ ಈ ಮೌಲಿಕವಾದ ಕಾರ್ಯಕ್ರಮವನ್ನು ದ.ಕ. ಜಿಲ್ಲೆಯಾದ್ಯಂತದ ಪದವಿಪೂರ್ವ ಕಾಲೇಜುಗಳಲ್ಲಿ ನಡೆಸುವ ಜವಾಬ್ದಾರಿಯನ್ನು ಪುತ್ತೂರಿನ ಪ್ರೇರಣಾ ಸಂಸ್ಥೆಯು ವಹಿಸಿಕೊಂಡಿದೆ. ಈ ಕಾರ್ಯಕ್ರಮದ ಭಾಗವಾಗಿ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ ಆಯೋಜಿಸಿ ಪ್ರಥಮ ಮತ್ತು ದ್ವಿತೀಯ ಬಹುಮಾನಗಳನ್ನು ನೀಡಲಾಗುವುದು. ಇದರ ಜೊತೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ಮುಗಿದ ಬಳಿಕ ಎಲ್ಲಾ ಮಕ್ಕಳಿಗೂ ಉಚಿತವಾಗಿ ನುರಿತ ತರಬೇತುದಾರರಿಂದ ವೃತ್ತಿ ಮಾರ್ಗದರ್ಶನ ಕೊಡಿಸಲಾಗುವುದು. ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯುವ ಸಂಬಂಧವಾಗಿ ವಿವಿಧ ಕಾಲೇಜುಗಳಲ್ಲಿ ದಾಖಲಾತಿಯನ್ನು ಉಚಿತವಾಗಿ ಮಾಡಿಸಿಕೊಡಲಾಗುವುದು.
ವಿದ್ಯಾರಶ್ಮಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ನಡೆದ ರಸಪ್ರಶ್ನೆ ಸ್ಪರ್ಧೆ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಸೀತಾರಾಮ ಕೇವಳ ಅವರು ಮಾತನಾಡಿ ಸಂಸ್ಥೆಯ ಕಾರ್ಯವೈಖರಿಯನ್ನು ಶಾಘಿಸಿದರು. ಉಪನ್ಯಾಸಕ ಮುರಳೀಧರ ಕೆ. ಎಲ್. ಪ್ರಸ್ತಾವನೆಗೈದರು. ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವೈಭವಿ ಅವರು ಸ್ವಾಗತಿಸಿ ವಿದ್ಯಾರ್ಥಿ ಸರಕಾರದ ಅಧ್ಯಕ್ಷೆ ಕೆ. ಯಶಸ್ವಿ ರೈ ವಂದನಾರ್ಪಣೆ ಸಲ್ಲಿಸಿದರು. ಪ್ರೇರಣಾ ಸಂಸ್ಥೆಯ ಮ್ಯಾನೇಜರ್ ದಯಾಮಣಿ ನಾಗೇಶ್ ಕೆಡೆಂಜಿ ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿ ರಕ್ಷಿತಾ ಅವರು ಸ್ಪರ್ಧಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಮಹಮ್ಮದ್ ಷರೀಫ್ ಪ್ರಥಮ ಮತ್ತು ವಾಣಿಜ್ಯ ವಿಭಾಗದ ಶಮ್ಮಾಸ್ ಸಿ. ಆರ್. ದ್ವಿತೀಯ ಬಹುಮಾನಗಳನ್ನು ಗಳಿಸಿಕೊಂಡರು.