ಪುತ್ತೂರು: ಕೇರಳ ಹೇಗೆ ದೇವರ ರಾಜ್ಯವೋ, ಹಾಗೇ ಆರ್ಯಾಪು ದೇವರ ಗ್ರಾಮ. ಆದ್ದರಿಂದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವರ ಜೀರ್ಣೋದ್ಧಾರ ಕಾರ್ಯ ಸುಗಮವಾಗಿ ನಡೆಯಲಿದ್ದು, ಭಕ್ತರ ಸಮರ್ಪಣಾ ಭಾವ ಇಲ್ಲಿ ಅಗತ್ಯ ಎಂದು ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳೀಕೃಷ್ಣ ಹಸಂತ್ತಡ್ಕ ಹೇಳಿದರು.
ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶುಕ್ರವಾರ ದೇವರ ಅನುಜ್ಞಾ ಕಲಶ ಹಾಗೂ ಬಾಲಾಲಯ ಪ್ರತಿಷ್ಠೆಯ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಉತ್ತಮ ವ್ಯವಸ್ಥೆಯೊಂದಿಗೆ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವರ ಜೀರ್ಣೋದ್ಧಾರ ಕಾರ್ಯಕ್ಕೆ ಹೊರಟಿದ್ದೇವೆ. ಇಂತಹ ದೊಡ್ಡ ಜವಾಬ್ದಾರಿಯನ್ನು ನಿರ್ವಹಿಸಬೇಕಾದರೆ ಪ್ರತಿಯೊಬ್ಬರ ಪಾತ್ರ ಏನು, ಅದನ್ನು ಹೇಗೆ ನಿರ್ವಹಿಸಬೇಕು ಎನ್ನುವುದನ್ನು ತಿಳಿದುಕೊಳ್ಳಬೇಕು. ಆಗ ಕಾರ್ಪಾಡಿ ದೇವಸ್ಥಾನವನ್ನು ಮಾದರಿಯಾಗಿ ಜೀರ್ಣೋದ್ಧಾರ ಮಾಡಬಹುದು ಎಂದರು.
ವ್ಯವಸ್ಥೆಯಲ್ಲಿ ದೇವಸ್ಥಾನದ ಪಾತ್ರ ಪ್ರಮುಖ: ಕೇಶವ ಪ್ರಸಾದ್ ಮುಳಿಯ
ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಮಾತನಾಡಿ, ನಮ್ಮ ದೇಶದ ವ್ಯವಸ್ಥೆಯಲ್ಲಿ ದೇವಸ್ಥಾನಗಳ ಪಾತ್ರ ಬಹಳ ಪ್ರಮುಖವಾದದ್ದು. ವ್ಯವಸ್ಥೆಯಿಂದ ದೇವಳ ವಿಮುಖವಾದಂತೆ ಅಭಿವೃದ್ಧಿ ಪ್ರಕ್ರಿಯೆ ನಿಧಾನವಾಗುತ್ತಾ ಸಾಗಿತು. ದೇವಸ್ಥಾನದ ವ್ಯವಸ್ಥೆಯಲ್ಲಿ ಸಾಂಸ್ಕೃತಿಕ, ಶೈಕ್ಷಣಿಕ ಸೇರಿದಂತೆ ಎಲ್ಲವೂ ಇದೆ. ಇದನ್ನು ಅರಿತುಕೊಂಡು ಕಾರ್ಯರೂಪಕ್ಕೆ ಇಳಿದಾಗ, ಎಲ್ಲವೂ ಸರಿಯಾಗುತ್ತದೆ ಎಂದ ಅವರು, ಕಾರ್ಪಾಡಿ ದೇವಸ್ಥಾನದ ಜೀರ್ಣೋದ್ಧಾರದ ಕಾರ್ಯದಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತೇನೆ ಎಂದರು.
ಧರ್ಮಕಾರ್ಯದಿಂದ ಜೀವನ ಸಾಫಲ್ಯ: ಕಾರ್ತಿಕ್ ತಂತ್ರಿ
ಧಾರ್ಮಿಕ ಉಪನ್ಯಾಸ ನೀಡಿದ ಕಾರ್ತಿಕ್ ತಂತ್ರಿ, ಜೀವನದಲ್ಲಿ ಧರ್ಮಕಾರ್ಯ ಮಾಡಿದಾಗ ಜೀವನ ಸಾಫಲ್ಯ ಹೊಂದುತ್ತದೆ. ಧರ್ಮಕಾರ್ಯ ಯಾವುದು ಎಂದು ಕೇಳಿದರೆ ಮೊದಲನೆಯದಾಗಿ ನಾವು ಜೀವನದಲ್ಲಿ ಅಳವಡಿಸಿಕೊಳ್ಳುವ ಆಚಾರ – ವಿಚಾರ ಹಾಗೂ ಎರಡನೆಯದಾಗಿ ಧರ್ಮದ ಕೆಲಸ. ಹಾಗಾಗಿ ದೇವಸ್ಥಾನದ ಜೀರ್ಣೋದ್ಧಾರ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ಹೊಸ ದೇವಸ್ಥಾನವನ್ನು ನಿರ್ಮಿಸುವುದಕ್ಕಿಂತ, ನಮ್ಮ ಹಿರಿಯರು ಆರಾಧಿಸಿಕೊಂಡು ಬಂದಿರುವ ದೇವಸ್ಥಾನವನ್ನು ಮುಂದುವರಿಸಿಕೊಂಡು ಹೋಗುವುದು ಅತೀ ಅಗತ್ಯ ಎಂದರು.
ಎಲ್ಲರ ಸಹಕಾರ ಅಗತ್ಯ: ಸರಸ್ವತಿ
ಆರ್ಯಾಪು ಗ್ರಾಮ ಪಂಚಾಯತ್ ಅಧ್ಯಕ್ಷೆ ಸರಸ್ವತಿ ಮಾತನಾಡಿ, ದೇವಸ್ಥಾನದ ಅಭಿವೃದ್ಧಿ ಆಗಬೇಕಾದರೆ ಎಲ್ಲರ ಸಹಕಾರ ಅಗತ್ಯ. ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದಲ್ಲಿ ಪ್ರತಿಯೊಬ್ಬರು ಕೈಜೋಡಿಸಿ ಎಂದು ಮನವಿ ಮಾಡಿಕೊಂಡರು.
ಜಾಗ ಖರೀದಿಗೆ ಮೊದಲು ಸರ್ವೆ: ಸುಧಾಕರ್ ರಾವ್ ಆರ್ಯಾಪು
ಪ್ರಾಸ್ತಾವಿಕವಾಗಿ ಮಾತನಾಡಿದ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಧಾಕರ್ ರಾವ್ ಆರ್ಯಾಪು, ಎಲ್ಲಾ ದೈವಿಕ ಕಾರ್ಯಕ್ರಮ ತಂತ್ರಿಗಳ ಮೂಲಕ ನೆರವೇರಿದೆ. ಇನ್ನು ಮುಂದಿನ ಕಾರ್ಯಗಳನ್ನು ನಾವು ಮಾಡಬೇಕಾಗಿದೆ. ದೇವಸ್ಥಾನಕ್ಕೆ ಅಗತ್ಯ ಜಾಗ ಖರೀದಿ ಮಾಡಲಾಗಿದೆ. ಇನ್ನಷ್ಟು ಜಾಗ ಖರೀದಿ ಆಗಬೇಕಾಗಿದೆ. ಇದಕ್ಕೆ ಮೊದಲು ಸರ್ವೆ ಕಾರ್ಯ ಆಗಬೇಕಾಗಿದೆ. ದೇವಸ್ಥಾನದ ಗರ್ಭಗುಡಿಗೆ ತಾಮ್ರದ ಮುಚ್ಚಿಗೆ, ಸುತ್ತುಪೌಳಿಯ ಕಾರ್ಯ, ಯಾಗ ಶಾಲೆ, ದಾಸ್ತಾನು ಕೊಠಡಿ, ಪಾಕಶಾಲೆಯೂ ನಿರ್ಮಾಣವಾಗಬೇಕಾಗಿದೆ ಎಂದರು.
ಸ್ವಾಗತಿಸಿ ಮಾತನಾಡಿದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಮಾತನಾಡಿ, ದೇವಸ್ಥಾನದ ಮುಂಭಾಗದ ಜಾಗ ಖರೀದಿ ಆಗಿದೆ. ಜಾಗ ಖರೀದಿಗೆ ಮೊದಲು ಭಯವಿತ್ತು. ಆದರೆ ಭಕ್ತರ ಸಹಕಾರದಿಂದ ಜಾಗ ಖರೀದಿಸಿ, ಒಂದಷ್ಟು ಹಣ ಉಳಿದಿದೆ. ಹಾಗಾಗಿ ನಾವು ಹೊರಟಿರುವ ಕಾರ್ಯಕ್ಕೆ ಭಗವಂತನ ಸಂಪೂರ್ಣ ಆಶೀರ್ವಾದವಿದ್ದು, ಭಕ್ತರು ಕೈಜೋಡಿಸಿದರೆ ಸುಂದರವಾದ ದೇಗುಲ ನಿರ್ಮಾಣ ಸಾಧ್ಯ ಎಂದರು.
ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ, ತಾಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಉಪಸ್ಥಿತರಿದ್ದರು. ಸುಮ ಮತ್ತು ಬಳಗ ಪ್ರಾರ್ಥಿಸಿದರು. ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಬಾಲಚಂದ್ರ ವಂದಿಸಿದರು. ವಿರೂಪಾಕ್ಷ ಭಟ್ ಕಾರ್ಯಕ್ರಮ ನಿರೂಪಿಸಿದರು. ಸೀತಾರಾಮ ರೈ ಕೈಕಾರ, ಸಂದೀಪ್ ಕಾರಂತ್, ಭಾರತೀ ಶಾಂತಪ್ಪ ಅವರು ಅತಿಥಿಗಳನ್ನು ಗೌರವಿಸಿದರು.
ಬಾಲಾಲಯ ಪ್ರತಿಷ್ಠೆ
ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಶುಕ್ರವಾರ ಬೆಳಿಗ್ಗೆ ಮಹಾಗಣಪತಿ ಹೋಮ ನಡೆದು, ಮೀನ ಲಗ್ನದಲ್ಲಿ ದೇವರ ಬಾಲಾಲಯ ಪ್ರತಿಷ್ಠೆ, ಜೀವಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು.