ದಿಲ್ಲಿಯ ಕೆಂಪುಕೋಟೆಯ ಮೇಲೆ 78ನೇ ಸ್ವಾತಂತ್ರೋತ್ಸವದ ಧ್ವಜಾರೋಹಣ ನೆರವೇರಿಸಿದ್ದಾರೆ. ಧ್ವಜಾರೋಹಣದ ಬಳಿಕ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಅಸಂಖ್ಯಾತ ಸ್ವಾತಂತ್ರ್ಯ ಪ್ರೇಮಿಗಳ ಬಲಿದಾನಕ್ಕೊಂದು ದೊಡ್ಡ ಪ್ರಣಾಮ. ವಿಕಸಿತ ಭಾರತ 2047 ಕೇವಲ ಪದಗಳಲ್ಲ. 140 ಕೋಟಿ ಜನರ ಸಂಕಲ್ಪ ಎಂದು ಹೇಳಿದರು.
ಪ್ರಕೃತಿ ವಿಕೋಪದಿಂದ ಹಲವಾರು ಮಂದಿ ತಮ್ಮ ಕುಟುಂಬ, ಆಸ್ತಿಯನ್ನು ಕಳೆದುಕೊಂಡಿದ್ದಾರೆ. ಹೊರ ರಾಷ್ಟ್ರವೂ ನಷ್ಟ ಅನುಭವಿಸಿದೆ. ಇಂದು, ನಾನು ಅವರೆಲ್ಲರಿಗೂ ನನ್ನ ಸಹಾನುಭೂತಿಯನ್ನು ವ್ಯಕ್ತಪಡಿಸುತ್ತೇನೆ ಮತ್ತು ಈ ಬಿಕ್ಕಟ್ಟಿನ ಸಮಯದಲ್ಲಿ ಈ ರಾಷ್ಟ್ರವು ಅವರೊಂದಿಗೆ ನಿಲ್ಲುತ್ತದೆ ಎಂದು ನಾನು ಅವರಿಗೆ ಭರವಸೆ ನೀಡುತ್ತೇನೆ. ಇಂದು ನಾವು 140 ಕೋಟಿ ಜನರಿದ್ದೇವೆ, ನಾವು ಸಂಕಲ್ಪ ಮಾಡಿ ಒಂದು ದಿಕ್ಕಿನಲ್ಲಿ ಒಟ್ಟಾಗಿ ಸಾಗಿದರೆ, 2047 ರ ವೇಳೆಗೆ ನಾವು ಎಲ್ಲಾ ಅಡೆತಡೆಗಳನ್ನು ನಿವಾರಿಸಿ ‘ವಿಕಸಿತ ಭಾರತ್’ ಕನಸು ನನಸಾಗುವುದರಲ್ಲಿ ಸಂಶಯವಿಲ್ಲ ಎಂದರು.
ದೇಶದಲ್ಲಿ ಅಸಮಾನತೆಯನ್ನು ತೊಡೆದುಹಾಕಲು ಜಾತ್ಯಾತೀತ ನಾಗರಿಕ ಕಾನೂನು ಜಾರಿಯಾಗಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅವರು ಇಂದು ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ದೇಶದ ಜನರನ್ನುದ್ದೇಶಿಸಿ ಮಾತನಾಡಿದ್ದಾರೆ.
ಏಕರೂಪ ನಾಗರಿಕ ಸಂಹಿತೆ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ ಮೋದಿ, ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಸುಪ್ರೀಂ ಕೋರ್ಟ್ ಮತ್ತೆ ಮತ್ತೆ ಚರ್ಚೆ ನಡೆಸಿದೆ, ಹಲವು ಬಾರಿ ಆದೇಶಗಳನ್ನು ನೀಡಿದೆ. ದೇಶದ ಬಹುಪಾಲು ವರ್ಗವು ಇದರ ಬಗ್ಗೆ ಅತೀವ ನಂಬಿಕೆ ಹೊಂದಿದೆ. ಇಲ್ಲಿವರೆಗೆ ಇದ್ದ ಕೋಮು ನಾಗರಿಕ ಸಂಹಿತೆಯಿಂದ ಮುಕ್ತವಾಗಿ ದೇಶದಲ್ಲಿ ಸೆಕ್ಯುಲರ್ ಸಿವಿಲ್ ಕೋಡ್ ಜಾರಿಯಾಗುವುದು ಅಗತ್ಯವಿದೆ. ಆಗ ಮಾತ್ರ ನಾವು ಧರ್ಮದ ಆಧಾರದ ತಾರತಮ್ಯದಿಂದ ಮುಕ್ತರಾಗುತ್ತೇವೆ ಎಂದರು.
ಇದೇ ವೇಳೆ ಅವರು ಕಳೆದ ಕೆಲವು ತಿಂಗಳಿಂದ ಬಾಂಗ್ಲಾದೇಶದಲ್ಲಿ ಭುಗಿಲೆದ್ದಿರುವ ಹಿಂಸಾಚಾರದ ಬಗ್ಗೆ ಪ್ರಸ್ತಾಪಿಸಿದರು. ಬಾಂಗ್ಲಾದೇಶದ ಶೀಘ್ರದಲ್ಲೇ ಸಹಜ ಸ್ಥಿತಿ ಬರುತ್ತದೆ ಎಂಬ ಭರವಸೆ ಇದೆ. ಅದಕ್ಕೆ ಬೇಕಾದ ಎಲ್ಲಾ ಸಹಕಾರವನ್ನು ಭಾರತ ನೀಡಲಿದೆ ಎಂದು ಹೇಳಿದರು.
ಇನ್ನು ಇದೇ ವೇಳೆ ಒಲಿಂಪಿಕ್ಸ್ ಕ್ರೀಟಾಪಟುಗಳಿಗೆ ಅಭಿನಂದನೆ ಸಲ್ಲಿಸಿದ ಅವರು, ಒಲಿಂಪಿಕ್ಸ್‌ನಲ್ಲಿ ಭಾರತದ ಧ್ವಜವನ್ನು ಎತ್ತರಕ್ಕೆ ಹಾರುವಂತೆ ಮಾಡಿದ ಯುವಕರೂ ನಮ್ಮೊಂದಿಗಿದ್ದಾರೆ. 140 ಕೋಟಿ ದೇಶವಾಸಿಗಳ ಪರವಾಗಿ ನಾನು ನಮ್ಮ ಎಲ್ಲಾ ಕ್ರೀಡಾಪಟುಗಳು ಮತ್ತು ಆಟಗಾರರನ್ನು ಅಭಿನಂದಿಸುತ್ತೇನೆ ಎಂದರು.
ಪ್ರಧಾನಿ ಮೋದಿ ತಮ್ಮ ಭಾಷಣದ ವೇಳೆ ಕೋಲ್ಕತ್ತಾದಲ್ಲಿ ನಡೆದಿರುವ ಟ್ರೈನಿ ವೈದ್ಯೆ ಅತ್ಯಾಚಾರ ಕೊಲೆ ಪ್ರಕರಣದ ಬಗ್ಗೆ ಪ್ರಸ್ತಾಪಿಸಿ ಆಕ್ರೋಶ ಹೊರಹಾಕಿದ್ದಾರೆ. ನಮ್ಮ ಮಾತೆ ಸಹೋದರಿಯರ ಮೇಲೆ ಅತ್ಯಾಚಾರ ನಡೆಯುತ್ತಿದೆ. ಪಾಪಿಗಳನ್ನು ಗಲ್ಲಿಗೇರಿಸಬೇಕು. ಆಗ ಮಾತ್ರ ಜನರಲ್ಲಿ ಅಪರಾಧಗಳ ಬಗ್ಗೆ ಭಯ ಮೂಡಲು ಸಾಧ್ಯ ದೇಶದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಬಹಳ ಉಗ್ರವಾಗಿ ಧ್ವನಿ ಎತ್ತಬೇಕಿದೆ. ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳ ತನಿಖೆ ನಡೆಸಿ ತಪ್ಪಿತಸ್ಥರನ್ನು ವಿಳಂಬ ಮಾಡದೆ ಶಿಕ್ಷಿಸಬೇಕು ಎಂದರು. ಹೊಸ ಕ್ರಿಮಿನಲ್ ಕಾನೂನು, ಭಾರತೀಯ ನ್ಯಾಯ ಸಂಹಿತಾ 2023, ಕಾನೂನು ವ್ಯವಸ್ಥೆಯನ್ನು ಸುಧಾರಿಸಿದೆ. ನಾವು ಹೊಸ ಕ್ರಿಮಿನಲ್ ಕಾನೂನುಗಳಲ್ಲಿ ಶಿಕ್ಷೆಗಿಂತ ನ್ಯಾಯಕ್ಕೆ ಆದ್ಯತೆ ನೀಡಿದ್ದೇವೆ ಎಂದರು.