ಪುತ್ತೂರು: ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 78 ವರ್ಷಗಳಾಗಿದ್ದು, ಇಂದು 78ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮವನ್ನು ಆಚರಿಸುತ್ತಿದ್ದು, ಯುವಜನತೆ 78 ವರ್ಷಗಳಲ್ಲಿ ದೇಶದಲ್ಲಿ ಆದ ಅಭಿವೃದ್ದಿಯ ಕುರಿತು ಚಿಂತಿಸದೆ ದೇಶದ ಮುಂದಿನ ಪ್ರಗತಿಯ ಕುರಿತು ಚಿಂತಿಸಬೇಕಾದ ಅಗತ್ಯವಿದೆ ಎಂದು ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ಹೇಳಿದರು.
ಅವರು ಪುತ್ತೂರು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಕಿಲ್ಲೇ ಮೈದಾನದ ಅಮರ್ ಜವಾನ್ ಸ್ಮಾರಕದ ಬಳಿ ನಡೆದ 78ನೇ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ, ಸಂದೇಶ ನೀಡಿದರು.
ಬ್ರಿಟಿಷರ ಆಳ್ವಿಕೆಯಲ್ಲಿದ್ದ ಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ಒಂದು ಐತಿಹಾಸಿಕ, ಭಾವನಾತ್ಮಕ ಕ್ಷಣ. ನಮ್ಮ ಹಿರಿಯರ ತ್ಯಾಗ, ಬಲಿದಾನಗಳ, ಹೋರಾಟಗಳ ಮೂಲಕ ಸ್ವಾತಂತ್ರ್ಯ ಲಭಿಸಿದೆ. ಸುಮಾರು 750 ವರ್ಷಗಳ ಕಾಲ ಬ್ರಿಟಿಷರ ದಬ್ಬಾಳಿಕೆಯ ಜತೆಗೆ ಸುಮಾರು 45 ಟ್ರಿಲಿಯನ್ ಡಾಲರ್ ಹಣ ಲೂಟಿ ಮಾಡಿದ್ದರು. ಈ ಸಂದರ್ಭ ಅವರ ವಿರುದ್ಧದ ಹೋರಾಟದಲ್ಲಿ ಸುಮಾರು 16.50 ಕೋಟಿ ಭಾರತೀಯರು ಪ್ರಾಣ ಕಳೆದುಕೊಂಡಿದ್ದರು ಎಂದು ತಿಳಿಸಿದ ಅವರು, ರಾಷ್ಟ್ರಪ್ರೇಮದೊಂದಿಗೆ ಮುಂದಿನ ದೇಶದ ಪ್ರಗತಿ ಯುವಜನತೆಯ ಮೇಲಿದೆ ಎಂದು ತಿಳಿಸಿದರು.
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅಧ್ಯಕ್ಷತೆ ವಹಿಸಿದ್ದರು. ತಹಶೀಲ್ದಾರ್ ಪುರಂದರ ಹೆಗ್ಡೆ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್., ನಗರಸಭೆ ಪೌರಾಯುಕ್ತ ಮಧು ಎಸ್. ಮನೋಹರ್ ಉಪಸ್ಥಿತರಿದ್ದರು.
ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಧ್ವಜಾರೋಹಣ ಮೊದಲು ಅಮರ್ ಜವಾನ್ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಪೊಲೀಸ್ ಇನ್ ಸ್ಪೆಕ್ಟರ್ ಆಂಜನೇಯ ರೆಡ್ಡಿ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು.