ಪುತ್ತೂರು: ಅಮಿತ್ ಶಾ ಭೇಟಿ ಪುತ್ತೂರಿಗೆ ಹೊಸ ರಂಗು ತಂದಿದೆ. ಉತ್ಸಾಹಕ್ಕೆ ಸಿಕ್ಕ ಯುವಕರು ಪೇಟೆಯಲ್ಲಿ ಮಾತ್ರವಲ್ಲ, ಗ್ರಾಮಾಂತರ ಭಾಗಗಳಲ್ಲೂ ಬಿಜೆಪಿ ಧ್ವಜ ಹಾರಿಸುತ್ತಿದ್ದಾರೆ. ಅಂದರೆ ಬಿಜೆಪಿಗೆ ಹೊಸ ಉತ್ಸಾಹ ಬಂದಿದ್ದು, ಇದು ರಾಜಕೀಯ ವಲಯದಲ್ಲೂ ಹೊಸ ಬಿರುಗಾಳಿ ಬೀಸುವ ಸಾಧ್ಯತೆಗಳು ದಟ್ಟವಾಗಿದೆ.
ಕ್ಯಾಂಪ್ಕೋ ಸುವರ್ಣ ಮಹೋತ್ಸವ, ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಕೃಷಿ ಯಂತ್ರ ಮೇಳ, ಹನುಮಗಿರಿಯಲ್ಲಿ ಅಮರಗಿರಿ ಲೋಕಾರ್ಪಣೆ ಹೀಗೆ ಸಾಲು ಸಾಲು ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಆಗಮಿಸುತ್ತಿರುವ ಅಮಿತ್ ಶಾ ಅವರ ಭೇಟಿ ರಾಜಕೀಯವಾಗಿಯೂ ಭಾರೀ ಕುತೂಹಲ ಮೂಡಿಸಿದೆ. ಇನ್ನೊಂದೆಡೆ ಕಾಂಗ್ರೆಸ್ ಮುಖಂಡರು ಅಮಿತ್ ಶಾ ಅವರ ಭೇಟಿಯನ್ನು ಸ್ವಾಗತಿಸಿದ್ದರೂ, ತಮ್ಮೊಳಗಿರುವ ಭಯವನ್ನು ಹೊರಹಾಕಿದ್ದಾರೆ.
ಶಾ ಅವರ ಹೆಲಿಕಾಫ್ಟರ್ ಲ್ಯಾಂಡಿಂಗಿಗಾಗಿ ಮೊಟ್ಟೆತ್ತಡ್ಕ ಹಾಗೂ ಹನುಮಗಿರಿಯಲ್ಲಿ ಎರಡು ಹೆಲಿಪ್ಯಾಡ್‍ಗಳು ಈಗಾಗಲೇ ಲೋಕಾರ್ಪಣೆಗೊಂಡಿವೆ. ಈ ಮೂಲಕ ಪುತ್ತೂರಿಗೆ ಎರಡು ಹೆಲಿಪ್ಯಾಡ್‍ಗಳು ಉಡುಗೊರೆಯಾಗಿ ಸಿಕ್ಕಂತಾಗಿದೆ. ಜೊತೆಗೆ ಅಮಿತ್ ಶಾ ಅವರು ಸಾಗಿ ಬರುವ ಹಾದಿಯ ಅಭಿವೃದ್ಧಿ ಕಾರ್ಯಗಳು ವೇಗ ಪಡೆಯತೊಡಗಿದೆ.
ಶಾ ಅವರ ಕಾರ್ಯಕ್ರಮ ನಡೆಯುವ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಮೈದಾನದಲ್ಲಿ ಸುವ್ಯವಸ್ಥಿತ ಸಭಾಂಗಣ ಈಗಾಗಲೇ ನಿರ್ಮಾಣಗೊಂಡಿದೆ. ವಿವೇಕಾನಂದ ಶಾಲೆ ಎದುರಿನ ಮುಖ್ಯರಸ್ತೆಯ ಇಕ್ಕೆಲಗಳಲ್ಲಿ ಬಹಳಷ್ಟು ದೂರದವರೆಗೂ ಬ್ಯಾರಿಕೇಡ್‍ಗಳನ್ನು ಹಾಕಿ, ಝೀರೋ ಟ್ರಾಫಿಕ್ ವ್ಯವಸ್ಥೆಗೆ ಅನುವು ಮಾಡಿಕೊಡಲಾಗಿದೆ.
ರಾಜಕೀಯ ಕುತೂಹಲ
ಶಾ ಅವರನ್ನು ಎದುರುಗೊಳ್ಳಲು ಪುತ್ತೂರು ಬಿಜೆಪಿ ಶಾಸಕ ಸಂಜೀವ ಮಠಂದೂರು ಅವರ ನೇತೃತ್ವದಲ್ಲಿ ಇನ್ನಿಲ್ಲದ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದೆ. ಕಾರ್ಯಕ್ರಮದ ಪ್ರಚಾರಾರ್ಥ ಈಗಾಗಲೇ ಪೇಟೆಯಾದ್ಯಂತ ಜಾಥಾ ನಡೆಸಲಾಗಿದೆ. ಗ್ರಾಮ ಗ್ರಾಮಗಳಲ್ಲಿ ಮಾಹಿತಿ ನೀಡಿ, ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಪುತ್ತೂರು ಪೇಟೆಯ ಅಲ್ಲಲ್ಲಿ ಬ್ಯಾನರ್‍ಗಳನ್ನು ಹಾಕುವ ಮೂಲಕ ಅಮಿತ್ ಶಾ ಅವರಿಗೆ ಸ್ವಾಗತ ಕೋರಲಾಗಿದೆ.