ಮಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವು ಮಂಗಳೂರಿನಿಂದ ಪುತ್ತೂರಿಗೆ ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯನ್ನು ಸ್ಥಳಾಂತರಿಸುವ ಪ್ರಸ್ತಾವನೆಯನ್ನು ಕೈಬಿಟ್ಟಿದೆ.
ಬಿಜೆಪಿಯ ಅಂದಿನ ಪುತ್ತೂರು ಶಾಸಕ ಸಂಜೀವ ಮಠಂದೂರುರವರು 2020ರಲ್ಲಿ ಎಸ್‌ಪಿ ಕಚೇರಿಯನ್ನು ಪುತ್ತೂರಿಗೆ ಸ್ಥಳಾಂತರಿಸಲು ಮುಂದಾಗಿದ್ದರು. ಅಂದಿನ ಗೃಹ ಸಚಿವ ಬಸವರಾಜ ಬೊಮ್ಮಾಯಿ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿದ್ದಾಗಿ ತಿಳಿಸಿದ್ದರು.
ಪುತ್ತೂರು ಪೇಟೆಯ ಮೂರು ಭಾಗಗಳಲ್ಲಿ 19 ಎಕರೆಗೂ ಹೆಚ್ಚ ಭೂಮಿಯನ್ನು ಎಸ್ಪಿ ಮತ್ತು ಡಿಎಆರ್ ಕಚೇರಿಗಳನ್ನು ಸ್ಥಳಾಂತರಿಸಲು ಮತ್ತು ಪೊಲೀಸ್ ಕ್ವಾರ್ಟಸ್ ಸ್ಥಾಪಿಸಲು ಕಾಯ್ದಿರಿಸಲಾಗಿದೆ ಎಂದು ಅವರು ತಿಳಿಸಿದ್ದರು. ಪುತ್ತೂರಿನಲ್ಲಿ ಎಸ್ಪಿ ಕಚೇರಿ ಸ್ಥಾಪಿಸಿದರೆ ದಕ್ಷಿಣ ಕನ್ನಡ ಪೊಲೀಸ್ ವ್ಯಾಪ್ತಿಯ ಎಲ್ಲಾ ಗಡಿಗಳು 50-60 ಕಿಲೋಮೀಟರ್ ವ್ಯಾಪ್ತಿಯಲ್ಲಿರುವುದರಿಂದ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದರು.
ಇತ್ತೀಚೆಗೆ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ಎಸ್‌ಪಿ ಕಚೇರಿಯನ್ನು ಪುತ್ತೂರಿಗೆ ಸ್ಥಳಾಂತರಿಸಲು ಕೈಗೊಂಡಿರುವ ನಿರ್ಣಯದ ಬಗ್ಗೆ ಮಾತನಾಡಿದ ಎಂಎಲ್‌ಸಿ ಐವನ್ ಡಿಸೋಜಾ ಕಚೇರಿ ಸ್ಥಳಾಂತರವಾದರೇ ಆಗುವ ಸಮಸ್ಯೆಗಳ ಬಗ್ಗೆ ವಿವರಿಸಿದ್ದರು. ಎಸ್ಪಿ ಕಚೇರಿಯನ್ನು ಪುತ್ತೂರಿಗೆ ಸ್ಥಳಾಂತರಿಸುವ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಅಥವಾ ಈ ಬಗ್ಗೆ ಸರ್ಕಾರದ ಮುಂದೆ ಯಾವುದೇ ಪ್ರಸ್ತಾವ ಇಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ್ ತಮ್ಮ ಉತ್ತರದಲ್ಲಿ ಖಡಾಖಂಡಿತವಾಗಿ ಹೇಳಿದರು. ಎಸ್ಪಿ ಕಚೇರಿ ಸ್ಥಳಾಂತರಕ್ಕೆ ಯಾವುದೇ ಜಮೀನು ಗುರುತಿಸಿಲ್ಲ ಎಂದು ಸಹ ಹೇಳಿದರು
ಕಾನೂನು ಮತ್ತು ಸುವ್ಯವಸ್ಥೆಯ ಹಿತದೃಷ್ಟಿಯಿಂದ ಪುತ್ತೂರು, ಸುಳ್ಯ ಮತ್ತು ಕಡಬ ತಾಲೂಕುಗಳ ವ್ಯಾಪ್ತಿಯಲ್ಲಿ ಡಿವೈಎಸ್ಪಿ ಕಚೇರಿ ಪುತ್ತೂರಿನಿಂದ ಕಾರ್ಯನಿರ್ವಹಿಸುತ್ತಿದ್ದು ಬಂಟ್ವಾಳ ಮತ್ತು ಬೆಳ್ತಂಗಡಿ ವ್ಯಾಪ್ತಿಯಲ್ಲಿ ಮತ್ತೊಂದು ಡಿವೈಎಸ್ಪಿ ಕಚೇರಿ ಕಾರ್ಯನಿರ್ವಹಿಸುತ್ತಿದೆ ಎಂದು ಸಚಿವರು ಹೇಳಿದರು.
ಪ್ರಸ್ತಾಪ ಅಂದರೇನು?ಬೇಡಿಕೆಯಲ್ಲವೇ?ಗತ ಶಾಸನ ಸಭೆಗಳಲ್ಲಿ ಪುತ್ತೂರು ವಿಧಾನಕ್ಷೇತ್ರದ ಗತ ಹಾಗೂ ಹಾಲಿ ಶಾಸಕರು ಪ್ರಸ್ತಾಪ ಮಾಡಿದ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿತ್ತು.ಮಾಧ್ಯಮಗಳು ಸುಳ್ಳು ವರದಿ ಮಾಡಿರಬಹುದು ಎಂಬ ತೀರ್ಮಾನಕ್ಕೆ ಜನಸಾಮಾನ್ಯರು ಬರಲು ಗೃಹಸಚಿವರ ಹೇಳಿಕೆ ಆಸ್ಪದನೀಡುತ್ತಲಿದೆ.ಬಹಳ ವರ್ಷಗಳಿಂದ ಈ ವಿಚಾರ ಮಾಧ್ಯಮಗಳ ಮೂಲಕ ಪ್ರಸ್ತಾಪವಾಗುತ್ತಲಿದೆ.ಶಾಸನಸಭೆಯಲ್ಲಿ ಜನಪ್ರತಿನಿಧಿ ಶಾಸಕರ ಮೂಲಕ ಪ್ರಸ್ತಾಪವಾಗುತ್ತಲಿದೆ.ಆದಾಗ್ಯೂ ಸರಕಾರದ ಮುಂದೆ ಪ್ರಸ್ತಾಪವಿಲ್ಲ ಎನ್ನುವುದಾದರೆ ಸರಕಾರ ಜನರ ಆಶೋತ್ತರಗಳ ಪೂರೈಕೆ ಬಗೆಗೆ ಆಸಕ್ತಿ ಹೊಂದಿಲ್ಲ ಎಂಬುದಾಗಿ ಜನ ತೀರ್ಮಾನಿಸುತ್ತಾರೆ.ತೀರ್ಮಾನಿಸಲೇ ಬೇಕಿದೆ.ಪುತ್ತೂರು ವಿಧಾನಸಭಾ ಕ್ಷೇತ್ರದ ಇನ್ನೊಂದು ಪ್ರಸ್ತಾಪ “ಮೆಡಿಕಲ್ ಕಾಲೇಜು” ವಿಚಾರವೂ ಇದೇ ಫಲಿತಾಂಶದತ್ತ ಸಾಗುವ ಸೂಚನೆ ಇಲ್ಲಿ ಕಂಡುಬರುತ್ತಿದೆ.