ಡಯಾಲಿಸಿಸ್ ಯಂತ್ರ ಖರೀದಿಗೆ ದಾನಿಗಳ ನೆರವು | ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆಯಲ್ಲಿ ನಡೆದ ಆರೋಗ್ಯ ರಕ್ಷಾ ಸಮಿತಿ ಸಭೆ ತೀರ್ಮಾನ

ಪುತ್ತೂರು: ತಾಲೂಕು ಸರಕಾರಿ ಆಸ್ಪತ್ರೆಯಲ್ಲಿರುವ ಅವಿಭಜಿತ ತಾಲೂಕುಗಳ ಏಕೈಕ ಡಯಾಲಿಸಿಸ್ ಕೇಂದ್ರಕ್ಕೆ ಇನ್ನೂ 6 ಡಯಾಲಿಸಿಸ್ ಮೆಷಿನ್‌ಗಳ ಅಗತ್ಯವಿದ್ದು, ದಾನಿಗಳಿಂದ ಸಂಗ್ರಹಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ.
ಶಾಸಕ ಸಂಜೀವ ಮಠಂದೂರು ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಪುತ್ತೂರು ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.
ಶಾಸಕ ಸಂಜೀವ ಮಠಂದೂರು ಮಾತನಾಡಿ, ಪುತ್ತೂರು ಹಾಗೂ ಕಡಬ ತಾಲೂಕಿಗೆ ಏಕೈಕ ಡಯಾಲಿಸಿಸ್ ಕೇಂದ್ರ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿದೆ. ಇದು ಸಾಕಾಗುತ್ತಿಲ್ಲ. ಆದ್ದರಿಂದ ಮಂಗಳೂರು ಸೇರಿದಂತೆ ಇತರ ಕಡೆಗಳಿಗೆ ಜನರು ಹೋಗಬೇಕಾದ ಪರಿಸ್ಥಿತಿ ಇದೆ. ಆದ್ದರಿಂದ ಉದ್ಘಾಟನೆಗೆ ಸಿದ್ಧವಾಗಿರುವ ಡಯಾಲಿಸಿಸ್ ಕೇಂದ್ರದ ಕಟ್ಟಡವನ್ನು ಸಾರ್ವಜನಿಕ ಬಳಕೆಗೆ ಮುಕ್ತವಾಗುವಂತೆ ಮಾಡಲು ಒತ್ತಡ ಬರುತ್ತಿದೆ. ಉದ್ಘಾಟನೆಯ ಸಂದರ್ಭದಲ್ಲಿ ಅವಶ್ಯಕತೆ ಇರುವ ಇನ್ನೂ 6 ಡಯಾಲಿಸಿಸ್ ಮೆಷಿನ್‌ಗಳನ್ನು ಹೊಂದಿಸಿಕೊಳ್ಳುವ ಅಗತ್ಯವಿದೆ. ಇದಕ್ಕಾಗಿ ರೋಟರಿ ಮೊದಲಾದ ಸಂಸ್ಥೆ ಹಾಗೂ ದಾನಿಗಳ ಸಹಾಯ ಪಡೆದುಕೊಳ್ಳಬೇಕಾಗಿದೆ. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳ ವತಿಯಿಂದ 4 ಡಯಾಲಿಸಿಸ್ ಮೆಷಿನ್ ಕೊಡಿಸುವುದಾಗಿ ಹಿಂದಿನ ಜಿಲ್ಲಾಧಿಕಾರಿಗಳು ತಿಳಿಸಿದ್ದರು ಎಂದು ನೆನಪಿಸಿದ ಅವರು, ಆರ್.ಓ. ಪ್ಲಾಂಟ್‌ಗೆ ಅಗತ್ಯವಿರುವ 10 ಲಕ್ಷ ರೂ.ವನ್ನು ಸರಕಾರದಿಂದ ಮಂಜೂರುಗೊಳಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಆಸ್ಪತ್ರೆ ವೈದ್ಯಾಧಿಕಾರಿ ಡಾ. ಆಶಾ ಪುತ್ತೂರಾಯ ಮಾಹಿತಿ ನೀಡಿ, ಈಗಾಗಲೇ ಪುತ್ತೂರು ಡಯಾಲಿಸಿಸ್ ಕೇಂದ್ರದಲ್ಲಿ ೫೪ ಮಂದಿಗೆ ನಿರಂತರವಾಗಿ ಡಯಾಲಿಸಿಸ್ ನೀಡಲಾಗುತ್ತಿದೆ. 48 ಮಂದಿ ಇನ್ನೂ ವೈಟಿಂಗ್‌ನಲ್ಲಿದ್ದಾರೆ. ಆದ್ದರಿಂದ ಈ ಬೇಡಿಕೆಯನ್ನು ಪೂರೈಸಲು ಒಟ್ಟು 12 ಡಯಾಲಿಸಿಸ್ ಯಂತ್ರಗಳ ಅಗತ್ಯವಿದೆ. ಆದರೆ ಆಸ್ಪತ್ರೆಯಲ್ಲಿ ಇರುವುದು 6 ಡಯಾಲಿಸಿಸ್ ಯಂತ್ರಗಳು ಮಾತ್ರ. ಆದ್ದರಿಂದ ಉಳಿದ ೬ ಯಂತ್ರಗಳನ್ನು ಜೋಡಿಸಿಕೊಳ್ಳಬೇಕಾದ ಅಗತ್ಯವಿದೆ. ಇದಕ್ಕೆ ಅಗತ್ಯವಿರುವ ಡಯಾಲಿಸಿಸ್ ಕೇಂದ್ರದ ಕಾಮಗಾರಿಯನ್ನು ಸುಮಾರು 60 ಲಕ್ಷ ರೂ. ವೆಚ್ಚದಲ್ಲಿ ಪೂರ್ಣಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಆಲುಕ್ಕಾಸ್ ಸ್ವರ್ಣ ಮಳಿಗೆಯವರು ಒಂದು ಯಂತ್ರವನ್ನು ಕೊಡುಗೆಯಾಗಿ ನೀಡುವುದಾಗಿ ತಿಳಿಸಿದ್ದಾರೆ. ಹೊಸ ಯಂತ್ರದ ಕೇಂದ್ರಕ್ಕೆ ಹೊಸದಾಗಿ ಆರ್.ಓ. ಪ್ಲಾಂಟ್ ನಿರ್ಮಿಸಲು 10ಲಕ್ಷ ರೂ. ಅಗತ್ಯವಿದೆ. ಇದರೊಂದಿಗೆ ಕೊಠಡಿಗೆ ಹವಾನಿಯಂತ್ರಣ ಅಳವಡಿಸಲು 3 ಲಕ್ಷ ರೂ. ಬೇಕಾಗಿದೆ. 6 ಡಯಾಲಿಸಿಸ್ ಯಂತ್ರ ಖರೀದಿಗೆ ಒಟ್ಟು 60 ಲಕ್ಷ ರೂ. ವೆಚ್ಚ ತಗುಲಲಿದೆ ಎಂದು ಮಾಹಿತಿ ನೀಡಿದರು.
ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿರುವಂತೆ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿಯೂ ಬ್ಲಡ್ ಬ್ಯಾಂಕ್ ತೆರೆಯುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಆಸ್ಪತ್ರೆಯಲ್ಲಿ ರಕ್ತ ಸಂಗ್ರಹಣಾ ವ್ಯವಸ್ಥೆಯಿದೆ. ಬ್ಲಡ್ ಬ್ಯಾಂಕ್ ಮಾಡುವುದಾದಲ್ಲಿ ಅದಕ್ಕೆ ಬೇಕಾದಂತೆ ಕೊಠಡಿ ಸೇರಿದಂತೆ ಎಲ್ಲಾ ವ್ಯವಸ್ಥೆಗಳಿವೆ. ಅದರೆ ಬ್ಲಡ್ ಬ್ಯಾಂಕ್ ಮಾಡಿದಲ್ಲಿ ಅದಕ್ಕೆ ಸಿಬ್ಬಂದಿಗಳ ನೇಮಕಗೊಳಿಸಬೇಕು. ಇದಕ್ಕೂ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆಗೆ ಈ ಬಗ್ಗೆ ಪ್ರಯತ್ನಿಸುವುದಾಗಿ ಶಾಸಕರು ಭರವಸೆ ನೀಡಿದರು.
ಪುತ್ತೂರು ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ ಒಂದು ವರ್ಷಗಳಾಗಿದೆ. ಅದಕ್ಕೆ ಪೂರಕವಾಗಿ 5.16 ಎಕ್ರೆ ಜಮೀನು ಮೀಸಲಿಟ್ಟು, ಆಸ್ಪತ್ರೆಯ ಹೆಸರಿನಲ್ಲಿ ಪಹಣಿ ಪತ್ರವನ್ನು ಮಾಡಲಾಗಿದೆ. ಈ ಬಗ್ಗೆ ತಾಂತ್ರಿಕ ವರದಿಯನ್ನು ನೀಡುವಂತೆ ಇಂಜಿನಿಯರ್ ಅವರಿಗೆ ಶಾಸಕರು ಸೂಚನೆ ನೀಡಿದರು.
ಸಭೆಯಲ್ಲಿ ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ, ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್. ಗೌರಿ, ಪೌರಾಯುಕ್ತ ಮಧು ಎಸ್. ಮನೋಹರ್, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ರಫೀಕ್ ದರ್ಬೆ, ಡಾ. ಕೃಷ್ಣ ಪ್ರಸನ್ನ, ದಿನೇಶ್ ಜೈನ್, ಕೃಷ್ಣ ನಾಯ್ಕ ಉಪಸ್ಥಿತರಿದ್ದರು. ಡಾ. ಜಯದೀಪ್ ಸ್ವಾಗತಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top