ಬಂಟ್ವಾಳ: ಹಿರಿಯರು ಕ್ರಿಯಾಶೀಲರಾಗಿರಲು ಪ್ರತಿಷ್ಠಾನದ ಚಟುವಟಿಕೆಗಳು ಪೂರಕವಾಗಿದ್ದು 50 ವರ್ಷಕ್ಕಿಂತ ಹೆಚ್ಚಿನ ವಯೋಮಾನದವರು ಸೇರ್ಪಡೆಗೊಳ್ಳುವ ಮೂಲಕ ಉತ್ತಮ ಸೇವಾ ಕಾರ್ಯಗಳು ನಡೆಯುವಂತಾಗಬೇಕೆಂದು ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಮೆಲ್ಕಾರು ಪ್ರತಿಷ್ಠಾನದ ಅಧ್ಯಕ್ಷ ಕಯ್ಯುರು ನಾರಾಯಣ ಭಟ್ ಹೇಳಿದರು.
ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಮೆಲ್ಕಾರು ಬಂಟ್ವಾಳ ಆಯೋಜಿಸಿದ್ದ ಕ್ಷೇತ್ರ ಸಂದರ್ಶನ ಕಾರ್ಯಕ್ರಮದ ನಿಮಿತ್ತ ಕಮಲಶಿಲೆ ಕ್ಷೇತ್ರದಲ್ಲಿ ಜರಗಿದ ಪ್ರತಿಷ್ಠಾನದ ಕೇಂದ್ರ ಸಮಿತಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರತಿಷ್ಠಾನದ ಮೂರನೇ ವಾರ್ಷಿಕೋತ್ಸವ ಡಿಸೆಂಬರ್ ತಿಂಗಳಲ್ಲಿ ಜರಗಲಿದ್ದು ತಾಲೂಕು ಘಟಕಗಳ ಪದಾಧಿಕಾರಿಗಳು ಪೂರ್ಣ ಸಹಕಾರ ನೀಡಬೇಕೆಂದು ತಿಳಿಸಿದರು.
ನೀಲಾವರದ ಗೋಶಾಲೆ, ಶ್ರೀ ಗೋಪಾಲಕೃಷ್ಣ ದೇವಸ್ಥಾನ, ಮಂದರ್ತಿ ಕ್ಷೇತ್ರ, ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನವನ್ನು ತಂಡದಲ್ಲಿದ್ದ 33 ಹಿರಿಯ ಸದಸ್ಯರು ವೀಕ್ಷಿಸಿದರು.
ಕಮಲಶಿಲೆ ಕ್ಷೇತ್ರದಲ್ಲಿ ಭರತ್. ಕೆ ಮಂಗಳೂರು ಭಜನಾ ಕಾರ್ಯಕ್ರಮವನ್ನು ನಡೆಸಿ ಕೊಟ್ಟರು. ಭವಾನಿ ಶಂಕರ ಶೆಟ್ಟಿ ಪುತ್ತೂರು, ಉದಯ ಶಂಕರ ರೈ ಪುಣಚ, ಜಯರಾಮ ಪೂಜಾರಿ ನರಿಕೊಂಬು, ಚಂದ್ರಶೇಖರ ಆಳ್ವ ಪಡುಮಲೆ, ರಾಮಕೃಷ್ಣ ನಾಯಕ್ ಕೋಕಳ ಮೊದಲಾದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ಸ್ವಾಗತಿಸಿ, ಪ್ರತಿಷ್ಠಾನದ ಉಪಾಧ್ಯಕ್ಷ ಜಯರಾಮ ಭಂಡಾರಿ ಎಂ ಧರ್ಮಸ್ಥಳ ವಂದಿಸಿದರು.