ಪುತ್ತೂರು : ಮುಂಡೂರು ಹಾಲು ಉತ್ಪಾದಕರ ಸಹಕಾರ ಸಂಘದ “ಅಮೃತಧಾರ” ವಿಸ್ತೃತ ಕಟ್ಟಡದ ಪ್ರವೇಶೋತ್ಸವ ಹಾಗೂ ಸಾಂದ್ರ ಶೀತಲೀಕರಣ ಘಟಕದ ಉದ್ಘಾಟನೆ ಗುರುವಾರ ನಡೆಯಿತು.
ಶಾಸಕ ಸಂಜೀವ ಮಠಂದೂರು ಉದ್ಘಾಟನೆ ನೆರವೇರಿಸಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಕೃಷಿಯ ಜತೆಗೆ ಹೈನುಗಾರಿಕೆಗೂ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮುಂಡೂರಿನಲ್ಲಿ ಪ್ರಾರಂಭಗೊಂಡ ಸಂಘವು ಉತ್ತಮ ಸಾಧನೆಯ ಹಾದಿಯಲ್ಲಿ ಮುನ್ನಡೆಯುತ್ತಿದೆ. ಪ್ರಸ್ತುತ 1300 ಲೀಟರ್ ಹಾಲು ಸಂಗ್ರಹದೊಂದಿಗೆ ಸಾಂದ್ರ ಶೀತಲೀಕರಣ ಘಟಕ ಸ್ಥಾಪಿಸುವ ಹಂತಕ್ಕೆ ಬೆಳೆದಿರುವುದು ಶ್ಲಾಘನೀಯ ಎಂದರು.
ದ.ಕ.ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ ಮಾತನಾಡಿ, ಆರ್ಥಿಕ ಶಕ್ತಿಯಾಗಿ, ಸ್ವಾವಲಂಬನೆಗೆ ಯುವ ಜನತೆಗೆ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಯುವಶಕ್ತಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಅವಿಭಜಿತ ಜಿಲ್ಲೆಯ ಅಸ್ಮಿತೆಯನ್ನು ಉಳಿಸಬೇಕಾಗಿದೆ ಎಂದರು.
ದ.ಕ.ಸಹಕಾರಿ ಉತ್ಪಾದಕರ ಹಾಲು ಒಕ್ಕೂಟದ ಉಪಾಧ್ಯಕ್ಷ ಎಸ್.ಬಿ.ಜಯರಾಮ ರೈ ಮಾತನಾಡಿ, ದ.ಕ.ಹಾಲು ಒಕ್ಕೂಟ ಸುಮಾರು 5.70 ಲಕ್ಷ ಲೀಟರ್ ಹಾಲು ಸಂಗ್ರಹಣೆಯೊಂದಿಗೆ ಹೆಮ್ಮರವಾಗಿ ಬೆಳೆದು ನಿಂತಿದೆ. ಪ್ರಸ್ತುತ ಉತ್ಪಾದಕರ ವೆಚ್ಚ ಅಧಿಕಾರಿಗಿದ್ದು, ಉತ್ಪಾದನೆಗೆ ಹಿನ್ನಡೆಯಾಗಿದೆ. ಆದರೂ ಹೈನುಗಾರರು ಗುಣಮಟ್ಟಕ್ಕೆ ಆದ್ಯತೆ ನೀಡಬೇಕು ಎಂದ ಅವರು, ಹಾಲಿನ ದರ ಏರಿಕೆ ಮಾಡುವಂತೆ ಸರಕಾರವನ್ನು ನಿಯೋಗದ ಮೂಲಕ ಒತ್ತಾಯಿಸಲಾಗುವುದು. ಒಕ್ಕೂಟಕ್ಕೆ 50 ಸಾವಿರ ಲೀಟರ್ ಹಾಲಿನ ಕೊರತೆಯಿದ್ದು,, ಅದರ ನಿವಾರಣೆಯು ಮುಂಡೂರು ಸಂಘದ ಮೂಲಕ ನಡೆಯಲಿದೆ ಎಂದರು.
ದ.ಕ.ಹಾಲು ಉತ್ಪಾದಕರ ಸಹಕಾರ ಒಕ್ಕೂಟದ ನಿರ್ದೇಶಕ ನಾರಾಯಣ ಪ್ರಕಾಶ್, ವ್ಯವಸ್ಥಾಪಕ ನಿರ್ದೇಶಕ ಡಿ.ಅಶೋಕ್ ಶುಭ ಹಾರೈಸಿದರು. ಮುಂಡೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಶ್ರೀಕಾಂತ್ ಆಚಾರ್ ಅಧ್ಯಕ್ಷತೆ ವಹಿಸಿದ್ದರು. ಒಕ್ಕೂಟದ ನಿರ್ದೇಶಕರಾದ ಪದ್ಮನಾಭ ಶೆಟ್ಟಿ ಅರ್ಕಜೆ, ಸವಿತಾ ಎನ್. ಶೆಟ್ಟಿ, ಸಹಕಾರ ಸಂಘಗಳ ಸಹಾಯ ನಿಬಂಧಕ ತ್ರಿವೇಣಿ ಆರ್.ರಾವ್ ಶುಭ ಹಾರೈಸಿದರು. ಮುಂಡೂರು ಗ್ರಾಪಂ ಅಧ್ಯಕ್ಷೆ ಪುಷ್ಪಾ ನಡುಬೈಲು, ಒಕ್ಕೂಟದ ವ್ಯವಸ್ಥಾಪಕ ಡಾ.ನಿತ್ಯಾನಂದ ಭಕ್ತ, ಜಿಎಂಸಿ ಉಪವ್ಯವಸ್ಥಾಪಕ ಡಾ.ಕೇಶವ ಸುಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷರಾದ ಗಂಗಯ್ಯ ಬಂಗೇರ ಕಂಪ, ಎಂ.ಪಿ.ಬಾಲಕೃಷ್ಣ ರಾವ್ ಪಜಿಮಣ್ಣು, ಹರೀಶ್ ಪುತ್ತೂರಾಯ, ಹಾಲಿ ಅಧ್ಯಕ್ಷ ಶ್ರೀಕಾಂತ್ ಆಚಾರ್, ಕಾರ್ಯದರ್ಶಿ ಜಿನ್ನಪ್ಪ ಸಾಲ್ಯಾನ್ ಅವರನ್ನು ಸನ್ಮಾನಿಸಲಾಯಿತು.
ನಿರ್ದೇಶಕಿ ಚೇತನಾ ಹಿಂದಾರು ಪ್ರಾರ್ಥಿಸಿದರು. ಸಂಘದ ಉಪಾಧ್ಯಕ್ಷ ಉಮೇಶ್ ಗುತ್ತಿನಪಾಲು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ನಿರ್ದೇಶಕ ಅನಿಲ್ ವಂದಿಸಿದರು. ಒಕ್ಕೂದ ವಿಸ್ತರಣಾಧಿಕಾರಿ ನಾಗೇಶ್ ಕಾರ್ಯಕ್ರಮ ನಿರೂಪಿಸಿದರು. ಸಂಘದ ನಿರ್ದೇಶಕರಾದ ಜಯಗುರು ಆಚಾರ್ ಹಿಂದಾರು, ಉದಯ ಪಜಿಮಣ್ಣು, ಅನಿಲ್ ಕುಮಾರ್, ರಮೇಶ್, ದೇವಕಿ, ಸೇಸಪ್ಪ ಶೆಟ್ಟಿ, ಚೇತನಾ, ಶಾರದಾ ಬಂಡಿಕಾನ, ರಂಜಿತ್ ಕಂಪ ಅತಿಥಿಗಳನ್ನು ಸ್ವಾಗತಿಸಿದರು.