ಬೆಳ್ತಂಗಡಿ : ಅರ್ಧದಲ್ಲೇ ನಿಂತಿದ್ದ ಪುಂಜಾಲಕಟ್ಟೆ-ಚಾರ್ಮಾಡಿ ರಾ.ಹೆ.-73ರ ಕಾಮಗಾರಿ ಗುತ್ತಿಗೆಯನ್ನು ಬೇರೆಯವರಿಗೆ ನೀಡುವ ಮೂಲಕ ಕಾಮಗಾರಿಗೆ ಮರು ಚಾಲನೆ ನೀಡಲಾಯಿತು.
ಮೊದಲು ಗುತ್ತಿಗೆದಾರ ಡಿ.ಪಿ. ಜೈನ್ ಅವರಿಗೆ ನೀಡಲಾಗಿತ್ತು. ನಷ್ಟವಾಗಿದೆ ಎಂದು ಹೇಳಿ ಅರ್ಧದಲ್ಲೇ ಕಾಮಗಾರಿಯಿಂದ ಹಿಂದೆ ಸರಿದ ಕಾರಣ ಬಳಿಕ ಕಾಮಗಾರಿಯನ್ನು ಮುಗೆರೋಡಿ ಕಂಪೆನಿಗೆ ಹೊಣೆಯನ್ನು ನೀಡಲಾಗಿದೆ.
ಸಂಸದ ಕ್ಯಾ.ಬ್ರಿಜೇಶ್ ಚೌಟ ಕಾಶಿಬೆಟ್ಟು ಬಳಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಜಿಲ್ಲೆಯಲ್ಲಿ ಈ ಹಿಂದೆ ಅನುಭವ ಇಲ್ಲದ ಗುತ್ತಿಗೆದಾರರು ಕಾಮಗಾರಿ ನಡೆಸಿದ್ದರು. ಈಗ ಅನುಭವಿ ಗುತ್ತಿಗೆದಾರರ ವ್ಯವಸ್ಥೆ ಮಾಡಲಾಗಿದೆ. ರಸ್ತೆಯ ಹೊಂಡಗಳನ್ನು ಮುಚ್ಚುವ ಕೆಲಸಕ್ಕೆ ಚಾಲನೆ ನೀಡಲಾಗಿದೆ ಎಂದರು.
35 ಕಿ.ಮೀ. ವ್ಯಾಪ್ತಿಯ ಹೆದ್ದಾರಿಯಲ್ಲಿ ಸುಮಾರು 7 ಸ್ಥಳಗಳಲ್ಲಿ ಸಂಪೂರ್ಣ ಕೆಟ್ಟು ಹೋಗಿದ್ದು, ಮೊದಲ ಹಂತದಲ್ಲಿ ತತ್‌ಕ್ಷಣ ಈ ಸ್ಥಳಗಳಲ್ಲಿ ಕಾಮಗಾರಿ ನಡೆಯಲಿದೆ. ಬಳಿಕ ಇತರ ಕಾಮಗಾರಿಗಳು ಮುಂದುವರಿಯಲಿವೆ ಎಂದರು.
ಶಾಸಕ ಹರೀಶ್ ಪೂಂಜ ಮಾತನಾಡಿ, ಸಂಸದ ಬ್ರಿಜೇಶ್ ಚೌಟ ಅವರು ಸಮಸ್ಯೆಯನ್ನು ಅರಿತು ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಹೆದ್ದಾರಿ ಇಲಾಖೆ ಅಧಿಕಾರಿಗಳಲ್ಲಿ ಮಾತನಾಡಿ ಸುವ್ಯವಸ್ಥೆ ಕಲ್ಪಿಸಿದ್ದಾರೆ. ಇನ್ನುಮುಂದೆ ಹೆದ್ದಾರಿ ಸಮಸ್ಯೆ ಬಗೆಹರಿಯಲಿದೆ ಎಂದು ಹೇಳಿದರು.