ಪುತ್ತೂರು: ತುಳು ಸಂಸ್ಕೃತಿ ಹಾಗೂ ಕೃಷಿ ಸಂಸ್ಕೃತಿಗೆ ಅವಿನಾಭಾವ ಸಂಬಂಧವಿದೆ. ಸಂಸ್ಕೃತಿ ನಶಿಸಿದರೆ ಕೃಷಿ ಇಲ್ಲ, ಕೃಷಿ ನಶಿಸಿದರೆ ಸಂಸ್ಕೃತಿ ಇಲ್ಲ. ಈ ನಿಟ್ಟಿನಲ್ಲಿ ಎರಡನ್ನೂ ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದ್ದು ಎಂದು ಬಂಟ್ವಾಳ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ತುಕರಾಮ ಪೂಜಾರಿ ಹೇಳಿದರು.
ಅವರು ಭಾನುವಾರ ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಮಂದಿರದಲ್ಲಿ ಮಹಿಳಾ ಬಿಲ್ಲವ ಸಂಘದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವರ ಸಂಘದ ಸಹಕಾರದೊಂದಿಗೆ ನಡೆದ ‘ಆಟಿದ ನೆಂಪುದ ಕೂಟ’ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ವೇದ ಸುಳ್ಳಾಗಬಹುದು, ಆದರೆ ಹಿರಿಯರು ಕಟ್ಟಿದ ಗಾದೆ ಸುಳ್ಳಾಗದು. ಈ ನಿಟ್ಟಿನಲ್ಲಿ ಹಿರಿಯರು ಮಾಡುತ್ತಿದ್ದ ಆಚರಣೆಗಳು, ಸಂಸ್ಕಾರ, ಸಂಸ್ಕೃತಿಯನ್ನು ಸಿದ್ಧಾಂತದೊಂದಿಗೆ ನಾವು ಆಚರಣೆ ಮಾಡುವ ಮೂಲಕ ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸ ಆಗಬೇಕು ಎಂದರು.
ಪುತ್ತೂರು ಬಿಲ್ಲವರ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿಶೇಷ ಸ್ಥಾನಮಾನ ಉಳ್ಳವರು ಬಿಲ್ಲವೆರು. ದೈವಸ್ಥಾನ ವಿಚಾರದಲ್ಲಿ ಬಿಲ್ಲವರಿಗೆ ಬಹಳ ದೊಡ್ಡ ಸ್ಥಾನ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ಆಚರಣೆಯಲ್ಲಿ ಮೂಲ ಕಳೆದುಕೊಂಡಿದೆ. ಆಟಿ ತಿಂಗಳಲ್ಲಿ ಆಡುವ ಚೆನ್ನೆಮಣೆ ಕೇವಲ ವೇದಿಕೆಗೆ ಮಾತ್ರ ಸೀಮಿತವಾಗಿದೆ. ತುಳುನಾಡಿನ ಸಂಸ್ಕೃತಿ, ಆಚಾರ ವಿಚಾರಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ಇಂತಹಾ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದರು.
ಮುಖ್ಯ ಅತಿಥಿಗಳಾಗಿ ಮಾಜಿ ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್, ವಿಟ್ಲ ಬಿಲ್ಲವ ಮಹಿಳಾ ಘಟಕದ ಅಧ್ಯಕ್ಷೆ ಮಮತಾ ಸಂಜೀವ ಪೂಜಾರಿ ಪಾಲ್ಗೊಂಡು ಶುಭ ಹಾರೈಸಿದರು. ವೇದಿಕೆಯಲ್ಲಿ ಬಿಲ್ಲವ ಹಿರಿಯ ಮುಖಂಡ ಬಾಳಪ್ಪ ಪೂಜಾರಿ, ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ಜಯಂತ ನಡುಬೈಲು, ಮುಖಂಡ ವಿಜಯ ಕುಮಾರ್ ಸೊರಕೆ ಉಪಸ್ಥಿತರಿದ್ದರು.
ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷೆ ವಿಮಲಾ ಸುರೇಶ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಬಂಟ್ವಾಳ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಇಂಜಿನಿಯರ್ ತಾರನಾಥ, ನಾಟಿವೈದ್ಯೆ ಲಲಿತಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಬಿಲ್ಲವ ಮಹಿಳಾ ಸಂಘದ ಸಂಚಾಲಕಿ ಉಷಾ ಅಂಚನ್ ಸ್ವಾಗತಿಸಿದರು. ದೀಕ್ಷಾ ಚಂದನ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಆಟಿ ತಿಂಗಳ ವಿವಿಧ ಖಾದ್ಯಗಳೊಂದಿಗೆ ಭೋಜನ ಸ್ವೀಕರಿಸಲಾಯಿತು.