ಪುತ್ತೂರು: ಅಮಿತ್ ಶಾ ಕಾರ್ಯಕ್ರಮದ ಪ್ರಚಾರಾರ್ಥ ಗುರುವಾರ ಪೇಟೆಯಾದ್ಯಂತ ನಡೆದ ಜಾಥಾ, ಅಂತ್ಯದಲ್ಲಿ ಏಕಾಏಕೀ ಬಿರುಸಾಯಿತು. ಮಾತಿನ ಚಕಮಕಿ ತಾರಕಕ್ಕೇರಿತು. ಮುಖಂಡರ ಮಧ್ಯಪ್ರವೇಶ ಬಿರುಸಿನ ವಾತಾವರಣವನ್ನು ತಿಳಿಗೊಳಿಸಿತೇನೋ ನಿಜ. ಆದರೆ ಸುಸೂತ್ರವಾಗಿ ಸಾಗುತ್ತಿದ್ದ ಜಾಥಾ ಕೊನೆಯಲ್ಲಿ ಬಿರುಸಾಗಲು ಕಾರಣವೇನು?
ಹೀಗೊಂದು ಪ್ರಶ‍್ನೆ ಬಿಜೆಪಿ ಪಾಳಯದೊಳಗೆ ಸದ್ದಿಲ್ಲದೆ ಹರಿದಾಡುತ್ತಿದೆ. ಜಾಥಾದ ಆರಂಭದಲ್ಲಿ ಎಲ್ಲವೂ ಸರಿಯಾಗಿಯೇ ಇತ್ತು. ಎಲ್ಲಾ ಮುಖಂಡರು ಜೊತೆಗೆ ಹೆಜ್ಜೆ ಮುಂದಿಡುತ್ತಾ ಸಾಗಿದರು. ಪ್ರಚಾರಾರ್ಥ ಜಾಥಾ ವಿಜೃಂಭಣೆಯಿಂದಲೇ ಸಾಗಿತ್ತು. ಆದರೆ ಕೊನೆಯಲ್ಲಿ ಜಾಥಾ ಅಂತ್ಯವಾಗುತ್ತದೆ ಎಂದಾಗ, ಏಕಾಏಕೀ ವಿಘ್ನ ಸ್ಫೋಟಿಸಿಕೊಂಡಿದ್ದಾದರೂ ಏಕೆ? ಮೊದಲೇ ರೂಪಿಸಿದ ಯೋಜನೆ ಇದಾಗಿತ್ತೇ? ಹೀಗೆಲ್ಲಾ ಪ್ರಶ್ನೆಗಳು ಬಿಜೆಪಿ ಪಡಸಾಲೆಯಲ್ಲಿ ಹರಿದಾಡುತ್ತಿದೆ.
ಅದೊಂದು ಕಾಲವಿತ್ತು. ಪುತ್ತೂರು ಕಾಂಗ್ರೆಸ್‍ನ ಭದ್ರ ಕೋಟೆಯಾಗಿತ್ತು. ಘಟಾನುಘಟಿ ನಾಯಕರು, ಅಧಿಕಾರಕ್ಕೆ ಹಂಬಲಿಸದೇ ಪಕ್ಷದ ಏಳ್ಗೆಗಾಗಿ ದುಡಿದರು, ಮಡಿದರು. ಆದರೆ ಬರಬರುತ್ತಾ, ಚಿತ್ರಣ ಬದಲಾಯಿತು. ಕಾಂಗ್ರೆಸಿನಲ್ಲೂ ಅಧಿಕಾರದ ಹಂಬಲ ಹೆಚ್ಚಾಯಿತು. ಸ್ವಪ್ರತಿಷ್ಠೆ ಮೇಳವಿಸಿತು. ಪರಿಣಾಮ, ಅಧಿಕಾರ ಬಿಜೆಪಿ ಪಾಲಾಯಿತು. ಹೀಗೆ ಮುಂದುವರಿದ ಕಾಂಗ್ರೆಸಿನ ಗೊಂದಲ ಇಂದಿಗೂ ಸರಿಯಾಗಿಲ್ಲ. ಆದ್ದರಿಂದಲೇ ಇಂದಿಗೂ ಕಾಂಗ್ರೆಸ್ ಅಧಿಕಾರ ಹಿಡಿಯಲು ಹರಸಾಹಸ ಪಡುತ್ತಿದೆ.
ಪ್ರತಿ ಸಲವೂ ಚುನಾವಣೆ ಬಂದಾಗ ಪ್ರತಿ ಪಕ್ಷದಲ್ಲೂ ಗೊಂದಲಗಳು ಮೂಡುವುದು ಸಹಜ. ಇಂತಹ ಗೊಂದಲಗಳು ಕಾಂಗ್ರೆಸಿನಲ್ಲಿ ತೆರೆದ ಪುಸ್ತಕವಾಗಿದ್ದರೆ, ಬಿಜೆಪಿಯಲ್ಲಿ ಮುನ್ನೆಲೆಗೆ ಬಂದದ್ದೇ ಇಲ್ಲ. ಚುನಾವಣೆ ಹತ್ತಿರವಾಗುತ್ತಿದ್ದಂತೆ, ಪಕ್ಷದ ಗೆಲುವಿಗೆ ಎಲ್ಲರೂ ಶ್ರಮಿಸುತ್ತಿದ್ದರು. ತಮ್ಮ ಹಂಬಲ, ಪ್ರತಿಷ್ಠೆಯನ್ನು ಬದಿಗಿಡುತ್ತಿದ್ದರು. ಆದರೆ ಇದೀಗ, ಬಿಜೆಪಿಯ ಭಿನ್ನಮತವೂ ತೆರೆದ ಪುಸ್ತಕದಂತಾಗಿದೆ. ಇದೇ ರೀತಿ ಮುಂದುವರಿದರೆ, ಬಿಜೆಪಿ ತನ್ನ ಅಧಿಕಾರವನ್ನು ಕೈಚೆಲ್ಲುವ ಸಾಧ್ಯತೆಯೇ ಅಧಿಕ.
ಬಿಜೆಪಿ ನಿಲುವೇನು?
ಇಂತಹ ಗೊಂದಲವನ್ನು ಪರಿಹರಿಸಲು ಬಿಜೆಪಿ ಮುಖಂಡರು ಕೈಗೊಳ್ಳುವ ನಿಲುವಾದರೂ ಏನು ಎಂಬುದು ಈಗ ಎದುರಾಗಿರುವ ದೊಡ್ಡ ಪ್ರಶ್ನೆ. ಮುಂದೊತ್ತಿ ಬರುತ್ತಿರುವ ಸವಾಲುಗಳನ್ನು ಸರಿಯಾಗಿ ನಿರ್ವಹಿಸದೇ ಹೋದರೆ, ಮುಂದೆ ಆಗುವ ಅನಾಹುತಕ್ಕೆ ಬೆಲೆ ತೆರಬೇಕಾದೀತು. ಪಕ್ಷ ಅಧಿಕಾರಕ್ಕೆ ಬಂದೇ ಬರುತ್ತೇ ಎನ್ನುವ ಅತಿ ವಿಶ್ವಾಸದಿಂದ, ಮುಖಂಡರು ಸುಮ್ಮನಾದರೆ ಬಿಜೆಪಿ ಮತ್ತೆ ಒಡೆದ ಮನೆಯಂತಾದೀತು ಎನ್ನುವ ವಿಶ್ಲೇಷಣೆಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.