ಪುತ್ತೂರು: ಕಲ್ಲಾರೆ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ಹಾಗೂ ವಿಶ್ವ ಹಿಂದೂ ಪರಿಷದ್ ಮಾತೃ ಮಂಡಳಿ ಜಂಟಿ ಆಶ್ರದಯದಲ್ಲಿ 50ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ ಆ.17 ರಂದು ಕಲ್ಲಾರೆ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದ ಸಭಾಭವನದಲ್ಲಿ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷೆ ವೀಣಾ ಕೊಳತ್ತಾಯ ತಿಳಿಸಿದ್ದಾರೆ.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, 1974 ರಲ್ಲಿ ನಮ್ಮ ಸಂಸ್ಥೆಯಿಂದ ವರಮಹಾಲಕ್ಷ್ಮೀ ಪೂಜೆ ಆರಂಭಗೊಂಡಿದ್ದು, ಎರಡು ವರ್ಷಗಳ ಕಾಲ ವೆಂಕಟ್ರಮಣ ದೇವಸ್ಥಾನದಲ್ಲಿ ನಡೆಯಿತು. ಬಳಿಕ ಎರಡು ಮಹಮ್ಮಾಯಿ ದೇವಸ್ಥಾನದಲ್ಲಿ ನಡೆಯಿತು. ಇದೀಗ ಕಳೆದ 45 ವರ್ಷಗಳಿಂದ ಕಲ್ಲಾರೆ ಶ್ರೀ ಗುರುರಾಘವೇಂದ್ರ ಮಠದಲ್ಲಿ ನಡೆಯುತ್ತಾ ಬಂದಿದೆ. ಈ ಬಾರಿ 50ನೇ ವರ್ಷದ ಪೂಜೆ ನಡೆಯುತ್ತಿದ್ದು, ಇದರ ನೆನಪಿಗಾಗಿ ಭಕ್ತಾದಿಗಳಿಗೆ ಪ್ರಸಾದ ರೂಪದಲ್ಲಿ ಲಕ್ಷ್ಮೀ ಮೂರ್ತಿಯನ್ನು ನೀಡಲಾಗುವುದು ಎಂದು ತಿಳಿಸಿದರು.
ಪೂಜೆಯ ಅಂಗವಾಗಿ ಆ.16 ಶುಕ್ರವಾರ ಸಂಜೆ 4.30 ಕ್ಕೆ ಕಲಶ ಪ್ರತಿಷ್ಠೆ, ಸಂಕಲ್ಪ, ಆ.17 ಶನಿವಾರ ಬೆಳಿಗ್ಗೆ 10 30 ರಿಂದ ಪೂಜೆ ಆರಂಭ. ಲಲಿತ ಸಹಸ್ರನಾಮ, ಬಳಿಕ ಬೊಳುವಾರು ತಿರುಪತಿ ತಿರುಮಲ ಟ್ರಸ್ಟ್ ನಿಂದ ಭಜನೆ, 12 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಬೆಳಿಗ್ಗೆ 11 ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ವೀಣಾ ಕೊಳತ್ತಾಯ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಯಾಗಿ ವಿಹಿಂಪ ದುರ್ಗಾವಾಹಿನಿ ಪ್ರಾಂತ ಸಂಯೋಜಕಿ ಸುರೇಖಾ ರಾಜ್ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಕಾರ್ಯದರ್ಶಿ ಪ್ರೇಮಲತಾ ರಾವ್, ಕೋಶಾಧಿಕಾರಿ ಉಮಾ ಪ್ರಸನ್ನ, ಮಾತೃ ಮಂಡಳಿ ಸತ್ಸಂಗ ಪ್ರಮುಖ್ ಜಯಲಕ್ಷ್ಮೀ, ವತ್ಸಲಾರಾಜ್ಞಿ ಉಪಸ್ಥಿತರಿದ್ದರು.