ಪುತ್ತೂರು: ಅಮಿತ್ ಶಾ ಅವರು ಪುತ್ತೂರಿಗೆ ಆಗಮಿಸುವ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳು ನಾನಾ ರೀತಿಯ ಹೇಳಿಕೆಗಳನ್ನು ನೀಡಲು ಶುರು ಮಾಡಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ಶಾಸಕ ಸಂಜೀವ ಮಠಂದೂರು ಅವರು, ಅಣಬೆಗೆ ಹೋಲಿಸಿ ಮಾತನಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಅನಪೇಕ್ಷಿತ ಸಂದೇಶವನ್ನು ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ ಎಂದು ಪುತ್ತೂರು ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್ ಹೇಳಿದರು.
ಶಾಸಕ ಸಂಜೀವ ಮಠಂದೂರು ಅವರ ಹೇಳಿಕೆಯನ್ನು ಮುಂದಿಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ತಪ್ಪು ಸಂದೇಶಗಳು ವೈರಲ್ ಆಗುತ್ತಿರುವ ಹಿನ್ನೆಲೆಯಲ್ಲಿ ಜೀವಂಧರ್ ಜೈನ್ ಅವರು ಈ ಹೇಳಿಕೆ ನೀಡಿದ್ದಾರೆ.
ಶಾಸಕ ಸಂಜೀವ ಮಠಂದೂರು ಅವರು, ವಿರೋಧ ಪಕ್ಷಗಳನ್ನು ಅಣಬೆಗೆ ಹೋಲಿಕೆ ಮಾಡಿ ಹೇಳಿಕೆ ನೀಡಿದ್ದಾರೆಯೇ ವಿನಃ ಯಾರದ್ದೋ ವೈಯಕ್ತಿಕ ವಿಚಾರಗಳ ಬಗ್ಗೆ ಹೇಳಿಲ್ಲ. ಅಮಿತ್ ಶಾ ಅವರು ಬರುವ ವೇಳೆಯಲ್ಲಿ ವಿರೋಧ ಪಕ್ಷಗಳ ಮುಖಂಡರು ಭಯದಿಂದ ಒಂದೊಂದು ಹೇಳಿಕೆ ನೀಡಲು ಶುರು ಮಾಡಿದ್ದಾರೆ. ಇಂತಹ ಹೇಳಿಕೆಗಳು ಅಣಬೆಗಳ ರೀತಿ, ಒಮ್ಮೆಗೆ ಚಿಗುರಿಕೊಳ್ಳುತ್ತವೆ. ಮಳೆ ನಿಂತ ನಂತರ ಅವು ತಾವಾಗಿಯೇ ಮುದುಡಿ ಹೋಗುತ್ತವೆ. ಆದ್ದರಿಂದ ಅಮಿತ್ ಶಾ ಅವರು ಬರುವ ವೇಳೆಯಲ್ಲಿ ವಿರೋಧ ಪಕ್ಷಗಳ ಹೇಳಿಕೆಗಳು, ಇನ್ನು ಬೇರೆ – ಬೇರೆ ರೀತಿಯ ತಂತ್ರಗಳು ಸಾಮಾನ್ಯ ಆಗಿರುತ್ತವೆ. ಆದ್ದರಿಂದ ಅವುಗಳ ಬಗ್ಗೆ ಬಿಜೆಪಿ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಶಾಸಕರು ಹೇಳಿಕೆ ನೀಡಿದ್ದಾರೆ ಎಂದು ತಿಳಿಸಿದರು.
ವಾಟ್ಸ್ ಆ್ಯಪ್ ನಲ್ಲಿ ಹರಿದಾಡುತ್ತಿರುವ ಸಂದೇಶಗಳು ಯಾರು ಕಳುಹಿಸಿದ್ದಾರೆಂದು ಸ್ಪಷ್ಟವಾಗಿಲ್ಲದ ಕಾರಣ, ಅವುಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಕಿಲ್ಲ ಎಂದು ಅವರು ತಿಳಿಸಿದ್ದಾರೆ.