ಬದುಕಿಗೆ ನಮ್ಮಲ್ಲಿರುವ ಜ್ಞಾನ ಕೌಶಲ್ಯಗಳು ದಾರಿದೀಪವಾಗುತ್ತವೆ. ಪ್ರತಿಯೊಂದು ಮಗುವಿನಲ್ಲೂ ಒಂದಲ್ಲ ಒಂದು ಪ್ರತಿಭೆ ಸುಪ್ತವಾಗಿರುತ್ತದೆ. ಅಂತಹ ಸುವರ್ಣ ಪ್ರತಿಭೆ ಪುತ್ತೂರು ವಿವೇಕಾನಂದ ಸೆಂಟ್ರಲ್ ಶಾಲಾ 9ನೇ ತರಗತಿಯ ಕು.ಆಪ್ತ ಚಂದ್ರಮತಿ ಮುಳಿಯ.
ಮಡಿಕೇರಿ, ಪುತ್ತೂರಿನಲ್ಲಿ ತನ್ನ ಪ್ರಾಥಮಿಕ ಶಿಕ್ಷಣ ಪಡೆದಿರುವ ಕು.ಆಪ್ತ 6ನೇ ತರಗತಿಯಲ್ಲಿರುವಾಗಲೇ ವಿವಿಧ ವಿಜ್ಞಾನ ಯೋಜನೆಗಳಲ್ಲಿ ತೊಡಗಿಸಿ ಏನಾದರೊಂದು ಸಾಧನೆ ಮಾಡಬೇಕೆಂಬ ಕನಸು ಹೊಂದಿರುವ ಪ್ರತಿಭಾವಂತೆ.
ಕು.ಆಪ್ತ ಚಂದ್ರಮತಿ ಮುಳಿಯ, ಆಫ್ರಿಕಾದ “ಟುನೀಷಿಯಾ ಅಸೋಸಿಯೇಷನ್ ಫಾರ್ ದಿ ಫ್ಯೂಚರ್ ಆಫ್ ಸೈನ್ಸ್ ಆಂಡ್ ಟೆಕ್ನಾಲಜಿ (ಎಟಿಎಎಸ್ ಟಿ) ಸಂಸ್ಥೆ ವತಿಯಿಂದ ನಡೆಸಲ್ಪಟ್ಟ 23-24ರ “ಐ ಫೆಸ್ಟ್:2” ವಿಜ್ಞಾನ ಮೇಳದಲ್ಲಿ ಭಾರತವನ್ನು ಪ್ರತಿನಿಧಿಸಿ, ತನ್ನ “ಕಿಡ್ಸ್ ಸೇಫ್ ಕನೆಕ್ಟ್ “ಎಂಬ ಸೃಜನಶೀಲ ಯೋಜನೆಯ ಮೂಲಕ,ಕಳೆದ ಮಾರ್ಚ್ 22 ರಿಂದ 28ರ ತನಕ ಟುನೀಷಿಯಾದಲಿದ್ದು, ದೇಶ-ವಿದೇಶಗಳಿಂದ ಬಂದ ಸುಮಾರು 400 ಸ್ಪರ್ಧಾಳುಗಳ ನಡುವೆ ಭಾಗವಹಿಸಿ ,ಕೊನೆಗೆ “ಟಾಪ್ ಟೆನ್ ಪ್ರೆಸೆಂಟೇಷನ್ ಗೆ ಅವಕಾಶ ಪಡೆದು “ಗ್ರಾಂಡ್ ಚಿನ್ನದ ಪದಕದ ಗೌರವಕ್ಕೆ ಪಾತ್ರಳಾದ ಪುತ್ತೂರಿನ, ಕರ್ನಾಟಕದ, ಭಾರತ ದೇಶದ ಕೀರ್ತಿ ಪತಾಕೆ ಬೆಳಗಿಸಿದ ಸುವರ್ಣ ಪ್ರತಿಭೆ.
ಪುತ್ತೂರಿನ ಖ್ಯಾತ ಸ್ವರ್ಣೋದ್ಯಮಿ, ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಿಕಟಪೂರ್ವ ಆಡಳಿತ ಮಂಡಳಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಮತ್ತು ಕೃಷ್ಣವೇಣಿ ಪ್ರಸಾದ್ ಮುಳಿಯರ ಸುಪುತ್ರಿ.
“ತಂದೆ ತಾಯಿಯವರು ನನಗೊದಗಿದ ಅವಕಾಶಕ್ಕೆ ಅಷ್ಟು ದೂರ ಕರೆದುಕೊಂಡು ಹೋಗಿ ಬೆಂಬಲಿಸಿದ್ದು ತನ್ನ ಯೋಗ”ವೆನ್ನುವ ಕು.ಆಪ್ತ ಚಂದ್ರಮತಿ, ತನ್ನ ಪ್ರತಿಭಾ ಸಾಧನೆಗೆ ಮಾರ್ಗದರ್ಶನ ನೀಡಿದ ವಸಂತಿ ಮೇಡಂ, ರಂಜಿತಾ ಎಂ, ವೆಂಕಟೇಶ್ , ಅಶ್ವಿನ್ ಕಲ್ಲಾಜೆ ಹಾಗೂ ಶಾಲಾ ಆಡಳಿತ ಮಂಡಳಿ, ಮುಖ್ಯ ಶಿಕ್ಷಕ, ಅಧ್ಯಾಪಕ ವೃಂದ, ವಿದ್ಯಾರ್ಥಿ ಸಹಪಾಠಿಗಳ ಪ್ರೋತ್ಸಾಹ ಹಾರೈಕೆಗಳೇ ತನಗೆ ಶ್ರೀ ರಕ್ಷೆ ಎಂದು ಹೇಳಲು ಮರೆಯಲಿಲ್ಲ.
ತನ್ನ ಯೋಜನೆಯ ಕುರಿತು ಟುನೀಷಿಯಾದ ಶಿಕ್ಷಣ ಮಂತ್ರಿಯವರ ಜೊತೆ ಮಾತನಾಡುವ ಅವಕಾಶ ಸಿಕ್ಕಾಗ ಮಾತನಾಡಿ ಎಲ್ಲರ ಗಮನ ಸೆಳೆದ ಉತ್ತಮ ಭಾಷಣಗಾರ್ತಿ. ಭರತನಾಟ್ಯ ಕಲಾವಿದೆಯೂ ಆಗಿರುವ ಕು.ಆಪ್ತ ಹರಿಕಥೆ ಮತ್ತು ಯಕ್ಷಗಾನ ತಾಳಮದ್ದಳೆ ಪ್ರವೀಣೆಯೂ ಹೌದು.
ಮೇ.4ರಂದು ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ಪುತ್ತೂರು ಇವರು “ಸ್ವರ್ಣ ಸಾಧನಾ ಪ್ರಶಸ್ತಿ ಪ್ರದಾನ”ಕಾರ್ಯಕ್ರಮ ಸಂದರ್ಭದಲ್ಲಿ ಕು.ಆಪ್ತ ಚಂದ್ರಮತಿ ಮುಳಿಯ ಈಕೆಯ ಅಂತಾರಾಷ್ಟ್ರೀಯ ಸಾಧನೆಗಾಗಿ ವಿಶೇಷ ಅಭಿನಂದನೆ ಸಲ್ಲಿಸಲಾಗಿದೆ. ಈಕೆಯ ಸಾಧನೆ ಇನ್ನೂ ಉನ್ನತ ಮಟ್ಟಕ್ಕೇರಲೆಂದು ಶುಭ ಹಾರೈಸೋಣ.
✍ ನಾರಾಯಣ ರೈ ಕುಕ್ಕುವಳ್ಳಿ.