ಉಪ್ಪಿನಂಗಡಿ: ಸಂಗಮ ಕ್ಷೇತ್ರವೆಂದೇ ಪ್ರಸಿದ್ಧಿಯಾದ ಉಪ್ಪಿನಂಗಡಿ ನೇತ್ರಾವತಿ ಹಾಗೂ ಕುಮಾರಧಾರ ನದಿ ತುಂಬಿ ಹರಿಯುತ್ತಿದ್ದು, ಸಂಗಮಕ್ಕೆ ಇನ್ನೇನು ಕ್ಷಣಗಣನೆ ಉಂಟಾಗಿದೆ. ಭಾರೀ ಸಂಖ್ಯೆಯಲ್ಲಿ ಜನಸಮೂಹ ಇಲ್ಲಿ ಸೇರಿದೆ.
ಇತ್ತ ಸುಬ್ರಹ್ಮಣ್ಯ ಹಾಗೂ ಅತ್ತ ಧರ್ಮಸ್ಥಳದಿಂದ ಹರಿದು ಬರುತ್ತಿರುವ ಮಳೆಯ ನೀರಿನಿಂದಾಗಿ ಉಪ್ಪಿನಂಗಡಿ ನೇತ್ರಾವತಿ ಹಾಗೂ ಕುಮಾರಧಾರ ನದಿಗಳು ಉಕ್ಕಿ ಹರಿಯುತ್ತಿದೆ. ಪರಿಣಾಮ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ಸುತ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.
ಉಪ್ಪಿನಂಗಡಿಗೆ ಭೇಟಿ ನೀಡಿದ ಮಾಜಿ ಶಾಸಕ ಸಂಜೀವ ಮಠಂದೂರು ಈ ಸಂದರ್ಭದಲ್ಲಿ ಮಾತನಾಡಿ, ನೇತ್ರಾವತಿ ಹಾಗೂ ಕುಮಾರಧಾರ ನದಿಗಳು ತುಂಬಿ ಹರಿಯುತ್ತಿದ್ದು, ನೀರು ನದಿ ದಡದಿಂದ ಮೇಲೆ ಬಂದು ನೆರೆಯ ಹಂತಕ್ಕೆ ತಲುಪಿದೆ. ನೆರೆ ಬಂದಾಗ ದ.ಕ.ಜಿಲ್ಲೆಯಲ್ಲಿ ಉಪ್ಪಿನಂಗಡಿ ಸಂಗಮ ಕ್ಷೇತ್ರದಲ್ಲಿ ಮಾತ್ರ ಬಹಳ ಎಚ್ಚರಿಕೆ ವಹಿಸಲಾಗುತ್ತಿದೆ. ಸುಬ್ರಹ್ಮಣ್ಯ, ಧರ್ಮಸ್ಥಳದಿಂದ ನೀರು ನಿರಂತರವಾಗಿ ಹರಿದು ಬರುತ್ತಿದ್ದು, ನೇತ್ರಾವತಿ, ಕುಮಾರಧಾರ ನದಿ ನೀರು ತುಂಬಿದ್ದು ಶ್ರೀ ಸಹಸ್ರಲಿಂಗೇಶ್ವರ ಸ್ನನ್ನಿಧಿಯಲ್ಲಿ ಸಂಗಮವಾಗಲು ಕೆಲವೇ ಕ್ಷಣಗಳು ಉಳಿದಿವೆ. ನದಿಯ ನೀರು ಬಹು ವೇಗವಾಗಿ ಏರುತ್ತಿದೆ. ಸಂಗಮವಾದ ಬಳಿಕ ತೀರ್ಥವನ್ನು ಪಡೆದು ಸ್ವ ಕ್ಷೇತ್ರಕ್ಕೆ ತೆರಳುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಧಾರ್ಮಿಕ ಪಾವಿತ್ರ್ಯದ ವಾತಾವರಣವಿದ್ದು, ಮಳೆಯ ಪ್ರಮಾಣ ನೋಡಿದಾಗ ಖಂಡಿತಾ ಸಂಗಮವಾಗುತ್ತೆ ಎಂಬ ಭಾವನೆ ನಮ್ಮದು. 1974 ಈ ಭಾಗದಲ್ಲಿ ನೆರೆ ಬಂದಿತ್ತು. ಈ ಸಂದರ್ಭದಲ್ಲಿ ಸಂಗಮವೂ ಆಗಿತ್ತು. ನದಿಯಲ್ಲಿ ಹೋಗುವ ಬೋಟುಗಳು ರಾಷ್ಟ್ರಿಯ ಹೆದ್ದಾರಿಯಲ್ಲಿ ಹೋಗುತ್ತಿದ್ದ ಪರಿಸ್ಥಿತಿ ಬಂದಿತ್ತು. ಆದರೂ ಈ ಬಾರಿ ಕೃಷಿ ಹಾನಿಯಾಗುವ ಸಂಭವ ಕಡಿಮೆಯಿದೆ. ಕೃಷಿ ಹಾನಿಯಾದರೆ ಸರಕಾರ, ಪೊಲೀಸ್ ಇಲಾಖೆ ತಕ್ಷಣ ಸೂಕ್ತ ಕ್ರಮ ಕೈಗೊಂಡು ಜನರ ರಕ್ಷಣೆ ಜತೆಗೆ ಕೃಷಿ ಹಾನಿಗೆ ಪರಿಹಾರ ಕಂಡುಕೊಳ್ಳುವ ಕೆಲಸವನ್ನು ಮಾಡಬೇಕು ಎಂದು ಹೇಳಿದ್ದಾರೆ.