ಪುತ್ತೂರು: ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ ನೇತೃತ್ವದಲ್ಲಿ ಮುಂಡೂರು ಗ್ರಾಮ ಪಂಚಾಯತ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸಹಕಾರದಲ್ಲಿ, ಪುತ್ತೂರು ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಸಂಯೋಜನೆಯಲ್ಲಿ ಮಿತ್ರಂಪಾಡಿ ಜಯರಾಮ ರೈ ಅಬುದಾಬಿಯವರ ಪೋಷಕತ್ವದಲ್ಲಿ ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಅಭಿಯಾನದಂಗವಾಗಿ ಗ್ರಾಮ ಸಾಹಿತ್ಯ ಸಂಭ್ರಮದ 15ನೇ ಕಾರ್ಯಕ್ರಮ ಮುಂಡೂರು ಪ್ರಾ. ಕೃ. ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆಯಿತು.
ಸಭಾ ಕಾರ್ಯಕ್ರಮದ ಮೊದಲು ವೈಭವದ ಮೆರವಣಿಗೆಗೆ ಚಾಲನೆ ನೀಡಲಾಯಿತು. ವಿದ್ಯಾರ್ಥಿಗಳ ಆಕರ್ಷಕ ಬ್ಯಾಂಡ್ ಸೆಟ್ ಹಾಗೂ ಹುಲಿ ವೇಷ ಬ್ಯಾಂಡ್ ಮೂಲಕ ಕನ್ನಡ ಭುವನೇಶ್ವರಿಗೆ ಜಯ ಘೋಷ ಮೊಳಗಿಸಿ ಮುಂಡೂರು ಗ್ರಾಮ ಪಂಚಾಯತ್ ಕಚೇರಿಯಿಂದ ಮಕ್ಕಳ ಸಾಹಿತ್ಯ ಸಂಭ್ರಮದ ಸರ್ವಾಧ್ಯಕ್ಷ ಸಮ್ನ ಅವರಿಗೆ ಕನ್ನಡ ಪೇಟವನ್ನು ತೊಡಿಸಿ ವೈಭವದ ಮೆರವಣಿಗೆ ಮೂಲಕ ಸಭಾಂಗಣಕ್ಕೆ ಕರೆತರಲಾಯಿತು.
ಮುಂಡೂರು ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಕಾರ್ಯಕ್ರಮ ಉದ್ಘಾಟಿಸಿ, ಗ್ರಾಮ ಸಾಹಿತ್ಯ ಸಂಭ್ರಮ ಮಕ್ಕಳ ಸಾಹಿತ್ಯ ಸಮ್ಮೇಳನದ ಮಾದರಿಯಲ್ಲೇ ನಡೆಯುತ್ತಿರುವುದು ತುಂಬಾ ಸಂತೋಷದ ವಿಚಾರ. ಇದರಿಂದಾಗಿ ವಿದ್ಯಾರ್ಥಿಗಳು ಸಾಹಿತ್ಯ ಕ್ಷೇತ್ರಕ್ಕೆ ಬರಲು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವೇದಿಕೆಯನ್ನು ಸೃಷ್ಟಿಸಿದೆ ಎಂದರು.
ಮುಖ್ಯ ಅತಿಥಿಯಾಗಿ ಮುಂಡೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಜಿತ್ ಶುಭ ಹಾರೈಸಿದರು.
9 ಸಾಧಕರಿಗೆ ಸನ್ಮಾನ :
ಮುಂಡೂರು ಗ್ರಾಮದ ವಿವಿಧ ಕ್ಷೇತ್ರದ ಸಾಧಕರಾದ ಮನೋರಮಾ ಹೆಜಮಾಡಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಬಿ. ವೆಂಕಟ್ರಮಣ ಶಗ್ರಿತ್ತಾಯ, ಬಿ. ವಿ. ಸೂರ್ಯ ನಾರಾಯಣ, ವಿನೋದ್ ರೈ ಸೊರಕೆ, ಕೆ. ಎಂ. ಹನೀಫ್ ರೆಂಜಲಾಡಿ, ಧರ್ಣಪ್ಪ ಪೂಜಾರಿ, ಜಯರಾಜ್ ಸುವರ್ಣ, ಯೂಸುಫ್ ರೆಂಜಲಾಡಿ, ಕು. ನವ್ಯ ರೆಂಜಲಾಡಿ ಅವರನ್ನು ಮುಂಡೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸುರೇಶ್ ಕುಮಾರ್ ಸೊರಕೆ ಅಭಿನಂದಿಸಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಗ್ರಾಮ ಗ್ರಾಮಗಳಿಗೆ ತೆರಳಿ ಮಾಡುವ ಈ ಗ್ರಾಮ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ಬಹಳ ಪರಿಣಾಮಕಾರಿಯಾಗಿದೆ ಎಂದು ತಿಳಿಸಿ ಸನ್ಮಾನಿತರಿಗೆ ಶುಭ ಹಾರೈಸಿದರು
ಸಭಾ ಕಾರ್ಯಕ್ರಮದ ಬಳಿಕ “ಸಾಹಿತ್ಯಕ್ಕೆ ಮುಂಡೂರು ಗ್ರಾಮದ ಕೊಡುಗೆ” ಕುರಿತಾಗಿ ಪತ್ರಕರ್ತರು, ತರಂಗ ಪತ್ರಿಕೆಯ ಉಪ ಸಂಪಾದಕಿ ಮನೋರಮಾ ಹೆಜಮಾಡಿ ಹಾಗು ಕನ್ನಡದಲ್ಲೂ ಐ.ಎ.ಎಸ್ ಬರೆಯಿರಿ ಕುರಿತು ಕ. ಸಾ. ಪ. ಪುತ್ತೂರಿನ ಐ. ಎ.ಎಸ್.ದರ್ಶನ ಇದರ ಪ್ರೇರಕ ಪ್ರಣವ್ ಭಟ್ ನಡೆಸಿಕೊಟ್ಟರು. ಗ್ರಾಮ ಪಂಚಾಯತ್ ಸದಸ್ಯೆ ಅರುಣ. ಎ. ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮುಂಡೂರು ಶಾಲಾ ಮುಖ್ಯ ಶಿಕ್ಷಕಿ ವಿಜಯ. ಪಿ ಅಧ್ಯಕ್ಷತೆಯಲ್ಲಿ ಬಾಲಕವಿಗೋಷ್ಠಿ, ಎಸ್. ಜಿ. ಎಂ. ಅನುದಾನಿತ ಪ್ರೌಢ ಶಾಲೆಯ ಮೋಹನ್ ಕುಮಾರ್ ಎನ್ ಅಧ್ಯಕ್ಷತೆಯಲ್ಲಿ ಬಾಲ ಕಥಾಗೋಷ್ಠಿ ನಡೆಯಿತು. ಪುತ್ತೂರು ಕರ್ನಾಟಕ ಜಾನಪದ ಪರಿಷತ್ತು ಸುಧಾಕರ್ ಕುಲಾಲ್ ಅವರು ಉಪಸ್ಥಿತರಿದ್ದರು.
ಮಧ್ಯಾಹ್ನ ಸ. ಉ. ಹಿ. ಪ್ರಾ. ಶಾಲೆ. ಮುಂಡೂರು, ಎಸ್. ಜಿ. ಎಂ. ಅನುದಾನಿತ ಪ್ರೌಢ ಶಾಲೆ ಸರ್ವೆ ಹಾಗು ಸ. ಹಿ. ಪ್ರಾ. ಶಾಲೆ ಭಕ್ತಕೋಡಿ ಇಲ್ಲಿನ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ ಕೊಟ್ಟರು. ಹಿರಿಯ ಸಾಹಿತಿಗಳು ಮತ್ತು ಮಧು ಪ್ರಪಂಚ ಪತ್ರಿಕೆಯ ಸಂಪಾದಕ ನಾರಾಯಣ ರೈ ಕುಕ್ಕುವಳ್ಳಿಯವರ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ವಿಭಾಗದ ಕವಿಗೋಷ್ಠಿ ನಡೆಯಿತು. ಕವಿಗೋಷ್ಠಿಯಲ್ಲಿ ಶ್ವೇತಾ ರಮೇಶ್ ಬೆಳ್ಳಿಪ್ಪಾಡಿ, ಗಿರೀಶ್ ಉಪ್ಪಿನಂಗಡಿ, ಅಕ್ಷತಾ ನಾಗನಕಜೆ, ವಿಂಧ್ಯಾ ಎಸ್ ರೈ, ರಶ್ಮಿತಾ ಸುರೇಶ್ ಜೋಗಿಬೆಟ್ಟು, ಪ್ರತೀಕ್ಷಾ ಆರ್ ಕಾವು, ವಿಜಯ ಕುಮಾರ್ ಕಾಣಿಚ್ಚಾರ್, ಮುಝಮಿಲ್ ಕರಾಯ, ಜಯಲಕ್ಷ್ಮಿ ಭಾಗವಹಿಸಿದ್ದರು.
ಸಮಾರೋಪ ಸಮಾರಂಭದಲ್ಲಿ ಸರ್ವೆ ಎಸ್ ಜಿ ಎಂ ಪ್ರೌಢ ಶಾಲಾ ವಿದ್ಯಾರ್ಥಿನಿ ಪೂಜಾ. ಕೆ ಸಮಾರೋಪ ಭಾಷಣದಲ್ಲಿ “ಸಾಹಿತ್ಯ ಪರಿಷತ್ತು ಗ್ರಾಮ ಗ್ರಾಮಕ್ಕೆ ಭೇಟಿ ನೀಡಿ ಸಾಹಿತ್ಯದಲ್ಲಿ ಆಸಕ್ತಿಯುಳ್ಳ ಮಕ್ಕಳನ್ನು ಸೇರಿಸಿ ವೇದಿಕೆ ಒದಗಿಸಿ ಕೊಡುವ ಮೂಲಕ ವಿದ್ಯಾರ್ಥಿಗಳಿಗೆ ಬರವಣಿಗೆ ಮತ್ತು ಓದುವಿಕೆಯಲ್ಲಿ ಆಸಕ್ತಿ ಹೆಚ್ಚಿಸಲು ಪೂರಕವಾಗಿದೆಯೆಂದು ಹರ್ಷ ವ್ಯಕ್ತಪಡಿಸಿದರು”
ಸಮಾರಂಭದಲ್ಲಿ 21ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ. ಎಚ್. ಜಿ. ಶ್ರೀಧರ ಶುಭ ಹಾರೈಸಿದರು. ಅಕ್ಷತಾ ನಾಗನಕಜೆ, ವಿಂಧ್ಯಾ ಎಸ್ ರೈ, ರಶ್ಮಿತಾ ಸುರೇಶ್ ಜೋಗಿಬೆಟ್ಟು, ಪ್ರತೀಕ್ಷಾ ಆರ್ ಕಾವು, ಶ್ವೇತಾ ರಮೇಶ್ ಬೆಳ್ಳಿಪ್ಪಾಡಿ, ಕು. ಅಪೂರ್ವ ಕಾರಂತ್ ವಿವಿಧ ಗೋಷ್ಠಿಗಳನ್ನು ನಿರ್ವಹಿಸಿದರು.
ಸಭಾಧ್ಯಕ್ಷತೆಯನ್ನು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ವಹಿಸಿದ್ದರು. ಗ್ರಾಮ ಸಾಹಿತ್ಯ ಸಂಭ್ರಮದ ಸಂಚಾಲಕ ನಾರಾಯಣ ಕುಂಬ್ರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ರಶ್ಮಿತಾ ಸುರೇಶ್ ಜೋಗಿಬೆಟ್ಟು ಸ್ವಾಗತಿಸಿದರು. ಅಪೂರ್ವ ಕಾರಂತ್ ವಂದಿಸಿದರು.