ಜಾತಿ ಸೃಷ್ಟಿಯಾಗಿದ್ದು ಪುರೋಹಿತರಿಂದ ಎಂಬ ಹೇಳಿಕೆಗೆ ಆಕ್ಷೇಪ
ಮುಜಾಫರ್ಪುರ: ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ವಿರುದ್ಧ ಬ್ರಾಹ್ಮಣರ ಅವಹೇಳನ ದೂರು ದಾಖಲಾಗಿದೆ. ಭಾಗವತ್ ಇತ್ತೀಚೆಗೆ ಮಾಡಿದ ಭಾಷಣದಲ್ಲಿ ಬ್ರಾಹ್ಮಣರನ್ನು ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಮುಂಬಯಿಯಲ್ಲಿ ಭಾನುವಾರ ನಡೆದ ಸಮಾರಂಭವೊಂದಲ್ಲಿ ಭಾಗವತ್ ಅವರ ಭಾಷಣದ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ವಕೀಲ ಸುಧೀರ್ ಕುಮಾರ್ ಓಜಾ ಅವರು ಮುಜಾಫರ್ಪುರದ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ದೇವರ ಎದುರಲ್ಲೆ ಎಲ್ಲರೂ ಸಮಾನರು, ಹಿಂದೂ ಸಮಾಜದಲ್ಲಿ ಕಠಿಣ ಜಾತಿ ಶ್ರೇಣಿ ಸೃಷ್ಟಿಯಾಗಿರುವುದು ಪುರೋಹಿತರಿಂದ ಹೊರತು ದೇವರಿಂದಲ್ಲ ಎಂದು ಹೇಳಿದ್ದರು. ಪುರೋಹಿತಶಾಹಿಯೊಂದಿಗೆ ಸಂಬಂಧ ಹೊಂದಿರುವ ಬ್ರಾಹ್ಮಣರ ಬಗ್ಗೆ ಭಾಗವತ್ ಮಾತನಾಡಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.
ಬಿಜೆಪಿಯ ಮಾತೃಸಂಸ್ಥೆಯಾದ ಆರ್ಎಸ್ಎಸ್, ಭಾಗವತ್ ಅವರು ಯಾವುದೇ ನಿರ್ದಿಷ್ಟ ಜಾತಿಯನ್ನು ಉಲ್ಲೇಖಿಸಿಲ್ಲ ಮತ್ತು ಪುರೋಹಿತರು ಎಂಬ ಪದದಿಂದ ಅವರು ಜಾತಿ ವ್ಯವಸ್ಥೆಯನ್ನು ಸೃಷ್ಟಿಸಿದ ಹಿಂದಿನ ವಿದ್ವಾಂಸರನ್ನು ಸೂಚಿಸಿದ್ದಾರೆ ಎಂದು ಸ್ಪಷ್ಟೀಕರಣ ನೀಡಿದೆ.
ಆದರೆ ವಕೀಲ ಓಜಾ ಅವರು ಭಾಗವತ್ ವಿರುದ್ಧ ಧಾರ್ಮಿಕ ಭಾವನೆಗಳಿಗೆ ಘಾಸಿ ಮಾಡಿದ ಮತ್ತು ಸಾರ್ವಜನಿಕ ಶಾಂತಿ ಉಲ್ಲಂಘನೆಗೆ ಸಂಬಂಧಿಸಿದ ಐಪಿಸಿ ಸೆಕ್ಷನ್ಗಳ ಅಡಿಯಲ್ಲಿ ಭಾಗವತ್ ಅವರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಮನವಿ ಮಾಡಿದ್ದಾರೆ. ನ್ಯಾಯಾಲಯ ಫೆ.20ರಂದು ಈ ಅರ್ಜಿಯ ವಿಚಾರಣೆ ನಡೆಸಲಿದೆ.