ಪುತ್ತೂರು : ಪುತ್ತೂರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಆಗಮಿಸುತ್ತಿರುವುದು ಸ್ವಾಗತಾರ್ಹ ವಿಚಾರವಾಗಿದೆ. ಆದರೆ ಅವರ ಪಾದಾರ್ಪಣೆಯಿಂದ ಪುತ್ತೂರಿನ ಪವಿತ್ರವಾದ ಮಣ್ಣು ವಿಷಪೂರಿತವಾಗದಿರಲಿ, ಇಲ್ಲಿನ ಪ್ರತಿಷ್ಠಿತ ಕ್ಯಾಂಪ್ಕೋ ಸಂಸ್ಥೆ ಗುಜರಾತ್ನ ಅಡಿಕೆ ಮಂಡಿಗೆ ಹೋಗದಿರುವಂತಾಗಲಿ ಎಂಬುದು ಪ್ರಾರ್ಥನೆಯಾಗಿದೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ವಿಶ್ವನಾಥ ರೈ ಹೇಳಿದರು.
ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ಪ್ರಮುಖ ಬೆಳೆಯಾದ ಅಡಿಕೆಗೆ ಕೊಳೆರೋಗ, ಎಲೆಚುಕ್ಕಿ ರೋಗಗಳಿಂದ ಬೆಳೆಗಾರರು ಕಂಗಾಲಾಗಿದ್ದಾರೆ. ಕ್ಯಾಂಪ್ಕೋ ಸಂಸ್ಥೆಯು ಈ ಬಗ್ಗೆ ನಿರ್ಧಾರ ಕೈಗೊಂಡು ಅಮಿತ್ ಶಾ ಅವರ ಮೂಲಕ ಪರಿಹಾರ ಕ್ರಮ ಕೈಗೊಳ್ಳಬೇಕು. ಅಲ್ಲದೆ ಕುಮ್ಕಿ ಹಕ್ಕು ಸಮಸ್ಯೆ ಪರಿಹಾರ, ಪುತ್ತೂರಿಗೆ ಸರ್ಕಾರಿ ಮೆಡಿಕಲ್ ಕಾಲೇಜು ಮಂಜೂರಾತಿಗೆ ಪೂರಕ ಕೆಲಸ ಕಾರ್ಯಗಳು ಮೋದಿ ಭೇಟಿಯ ಸಂದರ್ಭದಲ್ಲಿ ನಡೆಯಲಿ. ಇದನ್ನು ಅಮಿತ್ ಶಾ ಅವರಲ್ಲಿ ಕೇಳುವ ಎದೆಗಾರಿಕೆ ಇಲ್ಲಿನ ಬಿಜೆಪಿ ಮುಖಂಡರಿಗೆ ಮೂಡಿ ಬರಲಿ ಎಂದು ಆಗ್ರಹಿಸಿದ್ದಾರೆ.
ನಗರ ಕಾಂಗ್ರೆಸ್ ಅಧ್ಯಕ್ಷ ಹೆಚ್. ಮಹಮ್ಮದ್ ಆಲಿ ಮಾತನಾಡಿ ಸಂಘ ಪರಿವಾರದ ಭದ್ರಕೋಟೆ ಎಂದು ಹೇಳುತ್ತಿರುವ ಪುತ್ತೂರಿಗೆ ಆಗಮಿಸುತ್ತಿರುವ ಅಮಿತ್ ಶಾ ಅವರಿಗೆ ಇಲ್ಲಿ ಇಷ್ಟೊಂದು ಭದ್ರತೆ ಮಾಡುವ ಅಗತ್ಯವೇನಿದೆ. ರಾಹುಲ್ ಗಾಂಧಿ ಅವರಿಗೂ ಬೆದರಿಕೆ ಇದ್ದರೂ ಜೋಡೋ ಯಾತ್ರೆಯ ಮೂಲಕ ಅವರು ನಿರಂತರ ಜನರೊಂದಿಗೆ ಬೆರೆಯುತ್ತಿದ್ದಾರೆ. ಆದರೆ ಅಮಿತ್ ಶಾ ಅವರಿಗೆ ಜೀವಭಯ ಕಾಡುತ್ತಿದೆಯಾ ಎಂಬುದನ್ನು ಸ್ಪಷ್ಟಪಡಿಸಬೇಕು. ಅವರ ಭೇಟಿ ನಮ್ಮಲ್ಲಿನ ಕ್ಯಾಂಪ್ಕೋ ಸಂಸ್ಥೆಯನ್ನು ಸರ್ವನಾಶ ಮಾಡಲಿದೆಯೇ ಎಂಬ ಸಂಶಯವಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮೌರಿಸ್ ಮಸ್ಕರೇನಸ್, ಕಾರ್ಯದರ್ಶಿ ರೋಶನ್ ರೈ ಬನ್ನೂರು ಮತ್ತು ನಗರಸಭಾ ಮಾಜಿ ಅಧ್ಯಕ್ಷ ಮುಖೇಶ್ ಕೆಮ್ಮಿಂಜೆ ಉಪಸ್ಥಿತರಿದ್ದರು.