ಮಂಗಳೂರು : ಉತ್ತರ ಭಾರತದ ವ್ಯಾಪಾರಿಗಳಿಂದ ರಿಟೈಲ್ ಅಡಿಕೆ ವ್ಯಾಪಾರಿಗಳಿಗೆ ವಂಚಿಸುವ ಜಾಲವೊಂದು ದಕ್ಷಿಣ ಕನ್ನಡ ದಲ್ಲಿ ಸಕ್ರಿಯವಾಗಿದ್ದು, 2 ಕೋ.ರೂ.ಗೂ ಅಧಿಕ ಹಣ ವಂಚಿಸಿರುವ ಬಗ್ಗೆ ಮಂಗಳೂರಿನಲ್ಲಿ ಪ್ರಕರಣ ದಾಖಲಾಗಿದೆ.
ಗುಜರಾತ್ ನಲ್ಲಿ ತಮ್ಮ ಒಡೆತನದ ಪಾನ್ ಗುಟ್ಕಾ ತಯಾರಕ ಕಂಪೆನಿ ಇದೆಯೆಂದು ನಂಬಿಸಿ ಈ ವಂಚಕರು ಜಿಲ್ಲೆಯ ಹಲವಾರು ಚಿಲ್ಲರೆ ಅಡಿಕೆ ವ್ಯಾಪಾರಿಗಳಿಂದ ಲೋಡ್ ಗಟ್ಟಲೇ ಅಡಿಕೆ ಖರೀದಿಸಿದ್ದರು. ಆರಂಭದಲ್ಲಿ ಇವರು ಮಾಡಿದ ಹಲವು ಖರೀದಿಗಳಿಗೆ ಸೂಕ್ತ ಸಮಯದಲ್ಲಿ ಹಣ ಪಾವತಿಸಿದರು. ಇದರಿಂದ ವ್ಯಾಪಾರಿಗಳಿಗೆ ಇವರ ಕುರಿತಾಗಿ ವಿಶ್ವಾಸ ಮೂಡಿದೆ. ಇದರ ಲಾಭ ಪಡೆದ ವಂಚಕರು ಈ ಬಾರಿ ದೊಡ್ಡ ಪ್ರಮಾಣದಲ್ಲಿ ಅಡಿಕೆ ಪಡೆದು ಹಣ ನೀಡದೆ ಪರಾರಿಯಾಗಿದ್ದಾರೆ . ಈ ಎಲ್ಲ ವ್ಯವಹಾರಗಳು ಬಿಳಿ ಹಾಳೆ ಹಾಗೂ ವಿಶ್ವಾಸದ ಮೇಲೆ ನಡೆದಿದ್ದು, ಇದೀಗ ಮೋಸ ಹೋದ ವ್ಯಾಪಾರಸ್ಥರು ದೂರು ನೀಡಲಾಗದ ಸ್ಥಿತಿ ಉದ್ಭವಿಸಿದೆ.
ಜಿಎಸ್ಟಿ ಜಾರಿಯಾದ ಬಳಿಕವು ಬಹುತೇಕ ಅಡಿಕೆ ವ್ಯವಹಾರವು ಹವಾಲ ಮಾದರಿ ಟ್ಯಾಕ್ಸ್ ತಪ್ಪಿಸಿ ನಡೆಯುತ್ತಿದೆ. ಹೀಗಾಗಿ ಬಹುತೇಕ ಚಿಲ್ಲರೆ ವ್ಯಾಪಾರಸ್ಥರು ಅಡಿಕೆ ಖರೀದಿಸಿದಕ್ಕಾಗಲಿ ಅಥಾವ ಮಾರಾಟ ಮಾಡಿದನ್ನು ಸೇಲ್ಸ್ ಬಿಲ್ ನಲ್ಲಿ ತೋರಿಸುವುದಿಲ್ಲ. ಇದರ ಭರಪೂರ ಲಾಭ ಎತ್ತಿದ ವಂಚಕರು ಯಾವುದೇ ಕಾಗದ ಪತ್ರ ಮಾಡಿಕೊಳ್ಳದೇ ಅಡಿಕೆ ಖರೀದಿಸಿ ಕಾಲ್ಕಿತ್ತಿದ್ದಾರೆ.
ಕೆಲವೇ ಕೆಲವು ವ್ಯಾಪಾರಸ್ಥರು ನಿಯಮ ಪ್ರಕಾರ ಅಡಿಕೆ ವ್ಯವಹಾರ ನಡೆಸುತ್ತಿದ್ದು ಅವರು ಮಾತ್ರ ದೂರು ನೀಡಲು ಮುಂದಾಗಿದ್ದಾರೆ. ಹೀಗಾಗಿ ವಂಚನೆ ಬಗ್ಗೆ ಮಂಗಳೂರಿನಲ್ಲಿ ಕೇವಲ 3 ಕೇಸ್ ಅಷ್ಟೇ ದಾಖಲಾಗಿದೆ. ಮಾ. 29ರಂದು ರಾಹುಲ್ ಗುಪ್ತಾ ಅವರು ಕಪಿಲ್ ಮಟ್ಟಾನಿ ಎಂಬಾತನಿಗೆ 61 ಚೀಲ ಅಡಿಕೆ ಮಾರಾಟ ಮಾಡಿದ್ದು, ಆತ ಅದರ ಹಣ ಪಾವತಿಸಿದ್ದ.ಅದೇ ನಂಬಿಕೆಯ ಮೇಲೆ ಮೇ 17ರಿಂದ ಜೂ. 10ರ ನಡುವೆ ಆತನಿಗೆ ಅಡಿಕೆ ಮಾರಾಟ ಮಾಡಿದ್ದರು. ಆದರೆ 85,47,139 ರೂ. ಬಾಕಿ ಇರಿಸಿಕೊಂಡಿದ್ದ. ಹಣದ ಬಗ್ಗೆ ವಿಚಾರಿಸಿದಾಗ ಅವಾಚ್ಯ ಶಬ್ದದಿಂದ ಬೈದು ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ದೂರಲಾಗಿದೆ.
ಕಪಿಲ್ ಮಟ್ಟಾನಿ ಮತ್ತು ಕಮಲ್ ಮಟ್ಟಾನಿ ಸೇರಿಕೊಂಡು ಅಮಿತ್ ಶರ್ಮ, ವಿನಯ್ ಶರ್ಮ, ಸಿದ್ದಾರ್ಥ ಶರ್ಮ ಅವರಿಂದ ಮತ್ತು ಇತರರಿಂದ ಖರೀದಿಸಿದ ಒಣ ಅಡಿಕೆಯ ಒಟ್ಟು 1,34,71,854 ರೂ.ಗಳನ್ನು ಬಾಕಿ ಇರಿಸಿಕೊಂಡು ವಂಚಿಸಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಹಬೀಬ್ ರಹಿಮಾನ್ ಕೆ. ಮತ್ತು ಸೂಫಿ ಇಬ್ರಾಹಿಂ ಅವರ ಕಂಪೆನಿಯಿಂದ ಒಣ ಅಡಿಕೆ ಪಡೆದುಕೊಂಡಿರುವ ಕಮಲೇಶ್ ಪಡಲಿಯಾ 59,61,973 ರೂ.ಗಳನ್ನು ಬಾಕಿ ಇರಿಸಿಕೊಂಡಿದ್ದಾನೆ. ಆತನ ಮೊಬೈಲ್ ಸ್ವಿಚ್‌ಆಫ್ ಆಗಿದೆ. ಇದೇ ರೀತಿ ಕೆ.ಎಸ್. ನಾರಾಯಣ ಭಟ್ ಅವರಿಗೆ 25,24,639 ರೂ. ಸೇರಿದಂತೆ ಹಲವು ವ್ಯಾಪಾರಿಗಳಿಗೆ ಒಟ್ಟು 1,21,25,362 ರೂ.ಗಳನ್ನು ಬಾಕಿ ಇರಿಸಿ ಆರೋಪಿ ವಂಚಿಸಿದ್ದಾನೆ ಎಂದು ಮಂಗಳೂರಿನ ಸೆನ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.