ಪುತ್ತೂರು: ಹಿಂದುಳಿದ ವರ್ಗಗಳ ಧ್ವನಿ ಡಾ.ಬಿ.ಆರ್.ಅಂಬೇಡ್ಕರ್. ತನ್ನ ಅಪ್ರತಿಮ ಜ್ಞಾನದಿಂದ ದೂರದೃಷ್ಠಿಯುಳ್ಳವರಾಗಿದ್ದ ಇವರು, ಜನರ ಬೆನ್ನೆಲುಬಾಗಿ ನಿಂತವರು. ಬಡವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅವರ ಹೆಸರಿನಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮಾಡಲಾಗುತ್ತದೆ. ಇದೀಗ ಪುತ್ತೂರು ತಾಲೂಕಿನ ನಾಲ್ಕು ಗ್ರಾಮಗಳಿಗೆ ಅಂಬೇಡ್ಕರ್ ಭವನ ಮಂಜೂರುಗೊಳಿಸುವಲ್ಲಿ ಪುತ್ತೂರು ಶಾಸಕರಾದ ಸಂಜೀವ ಮಠಂದೂರು ಯಶಸ್ವಿಯಾಗಿದ್ದಾರೆ.
ಸಮಾಜ ಕಲ್ಯಾಣ ಇಲಾಖೆಯಡಿ ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮ ಪಂಚಾಯತಿನ ಇರ್ದೆಯಲ್ಲಿ, ನಿಡ್ಪಳ್ಳಿ ಗ್ರಾಪಂನ ನಿಡ್ಪಳ್ಳಿಯಲ್ಲಿ, ಶಾಂತಿಗೋಡು ಗ್ರಾಪಂನ ಶಾಂತಿಗೋಡಿನಲ್ಲಿ ಹಾಗೂ ಅರಿಯಡ್ಕ ಗ್ರಾಪಂನ ಮಾಡ್ನೂರಿನಲ್ಲಿ ಅಂಬೇಡ್ಕರ್ ಭವನಗಳು ತಲೆಎತ್ತಲಿವೆ. ಈ ನಾಲ್ಕು ಅಂಬೇಡ್ಕರ್ ಭವನಕ್ಕೆ ತಲಾ 20 ಲಕ್ಷ ರೂ.ನಂತೆ 80 ಲಕ್ಷ ಅನುದಾನ ಮಂಜೂರು ಮಾಡಲಾಗಿದೆ. ಈ ಪೈಕಿ ನಾಲ್ಕು ಗ್ರಾಪಂಗೆ ತಲಾ ಆರು ಲಕ್ಷ ರೂ.ನಂತೆ ಅನುದಾನ ಬಿಡುಗಡೆ ಮಾಡಲಾಗಿದೆ. ಉಳಿದ ಹಣವನ್ನು ಹಂತ ಹಂತವಾಗಿ ಬಿಡುಗಡೆಗೊಳ್ಳಲಿದೆ.
ನಿಡ್ಪಳ್ಳಿ ಅಂಬೇಡ್ಕರ್ ಭವನ ಕಾಮಗಾರಿ ಪಿಲ್ಲರ್ ಹಂತಕ್ಕೆ ಬಂದಿದ್ದು, ಉಳಿದ ಇರ್ದೆ, ಶಾಂತಿಗೋಡು, ಮಾಡನ್ನೂರು ಗ್ರಾಪಂನಲ್ಲಿ ಅಂಬೇಡ್ಕರ್ ಭವನಕ್ಕೆ ನೆಲ ಸಮತಟ್ಟು ಕಾಮಗಾರಿ ಮಾಡಲಾಗಿದೆ. ಇನ್ನೇನು ಕಾಮಗಾರಿ ಆರಂಭಗೊಳ್ಳಲಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಕೃಷ್ಣ ಬಿ. ಅವರು ತಿಳಿಸಿದ್ದಾರೆ.
ಅಂಬೇಡ್ಕರ್ ಭವನ ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬೇಕು ಎಂಬ ಬೇಡಿಕೆ ಹಲವು ಸಮಯಗಳಿಂದಲೇ ಇದೆ. ಆದರೆ ಇದರ ಕಡೆ ಯಾರು ಗಮನ ಕೊಟ್ಟಿರಲಿಲ್ಲ. ಆದರೆ ಶಾಸಕ ಸಂಜೀವ ಮಠಂದೂರು ಅವರು ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡು, ಮೊದಲ ಹಂತದಲ್ಲಿ 4 ಅಂಬೇಡ್ಕರ್ ಭವನಗಳನ್ನು ತರಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
ಹಿಂದುಳಿದ ವರ್ಗಗಳ ಬಡವರ ಕಲ್ಯಾಣಕ್ಕಾಗಿ ಅಂಬೇಡ್ಕರ್ ಭವನ ಸ್ಥಾಪನೆ ಮಾಡಲಾಗಿದ್ದು, ಈ ಭವನದಲ್ಲಿ ಹಿಂದುಳಿದ ವರ್ಗಗಳ ಬಡ ಕುಟುಂಬಗಳಿಗೆ ಸಭೆ, ಸಮಾರಂಭ, ಮದುವೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಜತೆಗೆ ಇತರ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಇದರ ನಿರ್ವಹಣೆಯ ಜವಾಬ್ದಾರಿ ಆಯಾ ಗ್ರಾಮ ಪಂಚಾಯತಿಗಳದ್ದು.