ಪುತ್ತೂರು: ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾದುದು. ಶಿಕ್ಷಕರು ಸಮಾಜದಲ್ಲಿ ಎಂದೆಂದಿಗೂ ಉತ್ಕೃಷ್ಟ ಸ್ಥಾನದಲ್ಲಿರುವವರು. ವಿದ್ಯಾರ್ಥಿಗಳಲ್ಲಿ ಶ್ರೇಷ್ಠ ಮೌಲ್ಯಗಳನ್ನು ತುಂಬಿ ಒಬ್ಬ ಉತ್ತಮ ನಾಗರೀಕನನ್ನಾಗಿ ಬೆಳೆಸುವವರು ಶಿಕ್ಷಕರು.ದೇಶದ ಉನ್ನತ ಪ್ರಜೆಯ ಹಿಂದೆ ಆತನ ಶಿಕ್ಷಕರ ಪಾತ್ರ ಇದ್ದೇ ಇರುತ್ತದೆ. ಹಾಗಾಗಿ ಒಬ್ಬ ಶಿಕ್ಷಕ ಸದಾ ನಿರಂತರ ಕಲಿಕೆಯಲ್ಲಿ ತೊಡಗಿಸಿಕೊಂಡಿರಬೇಕು. ಸಮಾಜದ ಏಳಿಗೆಯಲ್ಲಿ ಹಾಗೂ ದೇಶದ ಪ್ರಗತಿಯಲ್ಲಿ ಶಿಕ್ಷಕರು ಬಹು ಮುಖ್ಯ ಪಾತ್ರ ವಹಿಸಬೇಕು ಎಂದು ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ ಕೆ. ಎನ್ ಹೇಳಿದರು.
ವಿವೇಕಾನಂದ ಕಲಾ,ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ)ಕಾಲೇಜಿನಲ್ಲಿ ಸರಸ್ವತಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಲಾದ ಅಧ್ಯಾಪಕರ ಮಾಹಿತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪುತ್ತೂರಿನ ಸರಸ್ವತಿ ಚಾರಿಟೇಬಲ್ ಟ್ರಸ್ಟ್ ನ ವ್ಯವಸ್ಥಾಪಕ ಹಾಗೂ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ಲಿಮಿಟೆಡ್‌ನ ಅಧ್ಯಕ್ಷ ಎಸ್. ಆರ್ ಸತೀಶ್ ಚಂದ್ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮನಸ್ಸು ಎಂಬುವುದು ಮನುಷ್ಯನ ಅತ್ಯಂತ ಶಕ್ತಿಯುತವಾದ ಅಂಶ. ನಾವು ಕೇವಲ ಹಣ ಗಳಿಸಿದರೆ ಸಾಲದು. ಅದರೊಂದಿಗೆ ವಿದ್ಯೆಯು ಅತೀ ಮುಖ್ಯ. ನಾವು ಕಲಿತದ್ದು ಹಾಗೂ ತಿಳಿದುಕೊಂಡದ್ದು ಜೀವನದ ಕೊನೆಯವರೆಗೂ ನಮ್ಮೊಂದಿಗೆ ಇರುತ್ತದೆ. ನಾವು ಉನ್ನತ ರೀತಿಯಲ್ಲಿ ಬೆಳೆದಾಗ ಮಾತ್ರ ಉತ್ತಮ ಹಾದಿಯಲ್ಲಿ ಸಾಗಲು ಸಾಧ್ಯ ಎಂದು ಹೇಳಿದರು.
ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ.ವಿಷ್ಣು ಗಣಪತಿ ಭಟ್, ಗ್ರೇಸ್ ಅಕಾಡೆಮಿ ಬೆಂಗಳೂರಿನ ಅಂತರಾಷ್ಟ್ರೀಯ ಕಾರ್ಪೊರೇಟ್ ತರಬೇತುದಾರ ಸುಬ್ರಹ್ಮಣ್ಯ ಕುಳೇದು ಹಾಗೂ ಸರಸ್ವತಿ ಚಾರಿಟೇಬಲ್ ಟ್ರಸ್ಟ್ ನ ಉಪ ಪ್ರಧಾನ ವ್ಯವಸ್ಥಾಪಕಿ ಭವಾನಿ ಪ್ರಭು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಗ್ರೇಸ್ ಅಕಾಡೆಮಿ ಬೆಂಗಳೂರಿನ ಅಂತರಾಷ್ಟ್ರೀಯ ಕಾರ್ಪೊರೇಟ್ ತರಬೇತುದಾರ ಸುಬ್ರಹ್ಮಣ್ಯ ಕುಳೇದು ಉಪನ್ಯಾಸಕರಿಗೆ ಮಾಹಿತಿಕಾರ್ಯಾಗಾರ ನಡೆಸಿದರು.
ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಕೃಷ್ಣ ಕಾರಂತ್ ಸ್ವಾಗತಿಸಿ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಅರುಣ್ ಪ್ರಕಾಶ್ ವಂದಿಸಿದರು. ವ್ಯವಹಾರ ನಿರ್ವಹಣ ವಿಭಾಗದ ಮುಖ್ಯಸ್ಥೆ ರೇಖಾ ಪಿ ಕಾರ್ಯಕ್ರಮ ನಿರೂಪಿಸಿದರು.