ಪುತ್ತೂರು: 3 ತಿಂಗಳ ಹಿಂದೆ ಉದ್ಯೋಗ ನಿಮಿತ್ತ ವಿದೇಶಕ್ಕೆ ತೆರಳಿದ ನಗರದ ಕಲ್ಲೇಗ ಅಜೇಯನಗರ ನಿವಾಸಿ ಭರತ್ ಕುಮಾರ್ ಎಂಬವರು ಮೃತಪಟ್ಟಿದ್ದು, ಮಗನ ಸಾವಿನ ಬಗ್ಗೆ ನಮಗೆ ಸಂಶಯವಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ನಮಗೆ ಒದಗಿಸಿಕೊಡಬೇಕು ಎಂದು ಮೃತ ಭರತ್ ಕುಮಾರ್ ಅವರ ತಾಯಿ ಸಂಸದ ಕ್ಯಾ|ಬ್ರಿಜೇಶ್ ಚೌಟರಿಗೆ ಮನವಿ ಸಲ್ಲಿಸಿದ್ದಾರೆ.
ನಾನು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಅಜೇಯ ನಗರ ನಿವಾಸಿ ಭರತ್ ಕುಮಾರ್ 44 ವರ್ಷ ಇವರ ತಾಯಿ ಸುಲೋಚನಾ. ನನ್ನ ಮಗ 2024ರ ಮಾರ್ಚ್ 20ರಂದು Touchwood decor and furniture’ ಕಂಪನಿಗೆ ಕೆಲಸಕ್ಕೆ ಹೋಗಿದ್ದು ಅಲ್ಲಿ ಅವನಿಗೆ ಅವನು ಹೇಳಿದ ಹಾಗೂ ಅವನು ಕಲಿತಂತಹ ಕೆಲಸವನ್ನು ಕೊಡದೆ ದೊಡ್ಡ ದೊಡ್ಡ ಮರವನ್ನು ಲೋಡ್ ಮಾಡುವಂತಹ ಕೂಲಿ ಕೆಲಸ ಕೊಡಲಾಗಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ಈ ಬಗ್ಗೆ ನಾನು ಕಂಪನಿ ಹಾಗೂ ಮನೆಯವರಲ್ಲಿ ಹೇಳುತ್ತೇನೆ ಎಂದು ಅವನನ್ನು ಕರೆದುಕೊಂಡು ಹೋದಂತಹ ಮೋಹನ ಆಚಾರಿಯವನಲ್ಲಿ ಹೇಳಿದಾಗ ಅವನು ನನ್ನ ಮಗನನ್ನು ಮಾನಸಿಕವಾಗಿ ದೈಹಿಕವಾಗಿ ಟಾರ್ಚರ್ ಕೊಟ್ಟು ಹೆದರಿಸಿ ಬಾಯಿ ಮುಚ್ಚಿಸಿದ್ದಾನೆ.
ಪ್ರತಿನಿತ್ಯ ಇವನಲ್ಲಿ ನಮ್ಮ ಬಗ್ಗೆ ನೀನು ಕಂಪ್ಲೇಂಟ್ ಕೊಟ್ಟರೆ ನಿನ್ನನ್ನು ಜೈಲಿಗೆ ಕಳುಹಿಸುವುದಾಗಿಯೂ ಮನೆಯವರಿಗೆ ಹೇಳಿದರೆ ನಿನ್ನನ್ನು ಪೊಲೀಸ್ಗೆ ಹಿಡಿದು ಕೊಟ್ಟು ಇಲ್ಲೇ ಜೈಲಲ್ಲಿ ಶಾಶ್ವತವಾಗಿರುವಂತೆ ಮಾಡುತ್ತೇವೆ ಎಂದು ಬೆದರಿಸಿದ್ದಾನೆ. ಈ ಬಗ್ಗೆ ನಮ್ಮಲ್ಲಿ ನನ್ನ ಮಗ ಅಳುತ್ತಾ ಪ್ರತಿನಿತ್ಯ ಹೇಳಿಕೊಂಡಿದ್ದು ಅವನು ಮಾಡಿದ ಕಾಲ್ ರೆಕಾರ್ಡ್ ವಿಡಿಯೋ ರೆಕಾರ್ಡ್ ನಮ್ಮ ಬಳಿ ಇದೆ. ಅಲ್ಲದೆ ಕಂಪನಿಯ ಹೆಚ್ಆರ್ ಕೂಡ ಈ ವಿಷಯದ ಬಗ್ಗೆ ನಮ್ಮ ಗಮನಕ್ಕೆ ತಂದಿಲ್ಲ ಹಾಗೂ ಅವನ ಸಮಸ್ಯೆಗೆ ಸ್ಪಂದಿಸಲಿಲ್ಲ. ಅವನು ಕಾಲು ನೋವು, ತಲೆ ನೋವು ಹಾಗೂ ವಿಪರೀತ ಜ್ವರದಿಂದ ಬಳಲುತ್ತಿದ್ದರೂ ಅವನನ್ನು ಆಸ್ಪತ್ರೆಗೆ ಸೇರಿಸುವ ಕೆಲಸ ಕೂಡ ಮಾಡಿಲ್ಲ. ಕೊನೆಗೆ ಅವನನ್ನು ಟಾರ್ಚರ್ ಕೊಟ್ಟು ಸಾಯಿಸಿದ್ದು ಕಂಪನಿ ನಮಗೆ ಈ ಬಗ್ಗೆ ಮಾಹಿತಿ ನೀಡಲಿಲ್ಲ. ಅನ್ಯ ವ್ಯಕ್ತಿ ಈ ಬಗ್ಗೆ ನಮಗೆ ಮಾಹಿತಿ ನೀಡಿದ್ದು ಇವರ ಬಗ್ಗೆ ಸೂಕ್ತ ತನಿಖೆ ನಡೆಸಿ ನಮಗೆ ನ್ಯಾಯ ಕೊಡಬೇಕಾಗಿ ವಿನಂತಿ” ಸಂಸದರಿಗೆ ನೀಡಿದ ಮನವಿಯಲ್ಲಿ ಉಲ್ಲೇಖೀಸಿದ್ದಾರೆ.