ಪತ್ರಿಕಾಗೋಷ್ಠಿಯಲ್ಲಿ ಸಂಜೀವ ಮಠಂದೂರು
ಈಶ್ವರಮಂಗಲ : ಸಮಾಜದ ಎಲ್ಲಾ ಬಂಧುಗಳನ್ನು ಜೋಡಿಸಿ ರಾಷ್ಟ್ರಾಭಿಮಾನ ಮೂಡಿಸಬೇಕು ಎಂಬ ನಿಟ್ಟಿನಲ್ಲಿ ಹನುಮಗಿರಿ ಕ್ಷೇತ್ರದಲ್ಲಿ ದೇಶ ಪೂಜಾನಾ ಕಲ್ಪನೆಯಂತೆ ಶ್ರೀ ಭಾರತಿ ಅಮರ ಜ್ಯೋತಿ ಮಂದಿರ ನಿರ್ಮಾಣ ಮಾಡಿ ಮಂದಿರದ ಮೂಲಕ ಎಲ್ಲಾ ಪ್ರಜೆಗಳು ರಾಷ್ಟ್ರಭಕ್ತಿ ಉದ್ದೀಪನ ಮಾಡುವ ಸಂಗತಿ ಹನುಮಗಿರಿ ಕ್ಷೇತ್ರದಿಂದ ಆಗಲಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ಸೋಮವಾರ ಹನುಮಗಿರಿ ಕ್ಷೇತ್ರದಲ್ಲಿ ಪತ್ರಿಕಾಗೋಷ್ಠೀಯಲ್ಲಿ ಮಾತನಾಡಿ, ನೆ.ಮೂಡ್ನೂರು ಗ್ರಾಮದ ಈಶ್ವರಮಂಗಲದ ಸನ್ನಿಧಿಯಲ್ಲಿ ಭಾರತ ಮಾತೆ ಮಂದಿರ ಲೋಕಾರ್ಪಣೆ ಹೆಮ್ಮೆಯ ಸಂಗತಿ ಆಗಿದೆ. ಈ ಕ್ಷೇತ್ರದ ಎಲ್ಲಾ ವಿಚಾರಗಳನ್ನು ತಿಳಿದುಕೊಂಡು ಗೃಹ ಸಚಿವರು ಬರುತ್ತಿದ್ದಾರೆ. ಆಧ್ಯಾತ್ಮಿಕ ಬದುಕನ್ನು ಒಂದಷ್ಟು ಈ ಭಾಗದ ಜನ ತಿಳಿದುಕೊಳ್ಳಬೇಕು ಎಂಬುದು ಮಂದಿರ ನಿರ್ಮಾಣದ ಆಶಯವಾಗಿದೆ. ಅಮರಗಿರಿ ಸ್ವಾತಂತ್ರ್ಯ ನಂತರದ ರಾಷ್ಟ್ರಭಕ್ತಿ ಸಂದೇಶವನ್ನು ನೀಡುವ ಕೆಲಸ ಮಾಡುತ್ತದೆ ಎಂದ ಅವರು, ಕಾರ್ಯಕ್ರಮ ಬೆಳಿಗ್ಗೆ 10 ಗಂಟೆಗೆ ಆರಂಭಗೊಳ್ಳಲಿದ್ದು, ಗೃಹ ಸಚಿವ ಅಮಿತ್‌ಶಾ ಆಗಮಿಸಿದ ಬಳಿಕ ಅವರು ಲೋಕಾರ್ಪಣೆಗೊಳಿಸುವರು ಎಂದು ಹೇಳಿದರು.
ಕ್ಷೇತ್ರದ ಅಧ್ಯಕ್ಷ ನನ್ಯ ಅಚ್ಯುತ ಮೂಡೆತ್ತಾಯ ಮಾತನಾಡಿ, 2011 ರಲ್ಲಿ ಪಂಚಮುಖಿ ಹನುಮ ಹಾಗೂ 2017 ಕೋದಂಡ ರಾಮ ಪ್ರತಿಷ್ಠೆ ಮಾಡಲಾಗಿದೆ. ಇದೀಗ ಫೆ.೧೧ ರಂದು ಕ್ಷೇತ್ರದ ಅಮರಗಿರಿಯಲ್ಲಿ ಶ್ರೀ ಭಾರತಿ ಅಮರ ಜ್ಯೋತಿ ಮಂದಿರ ಉದ್ಘಾಟನಗೊಳ್ಳಲಿದೆ. ಇದಕ್ಕೆ ಪೂರಕವಾದ ವ್ಯವಸ್ಥೆ ಮಾಡಲಾಗಿದೆ. ಕೇಂದ್ರ ಗೃಹ, ಸಹಕಾರ ಸಚಿವ ಅಮಿತ್ ಶಾ ವಿಶೇಷವಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಾಜ ರಾಧಾಕೃಷ್ಣ ಆಳ್ವ, ನಾಗರಾಜ ನಡುವಡ್ಕ, ಕ್ಷೇತ್ರದ ಧರ್ಮದರ್ಶಿ ಶಿವರಾಮ ಕತ್ರಿಬೈಲು ಉಪಸ್ಥಿತರಿದ್ದರು.