ಬಂಟ್ವಾಳ: ಸಮಾಜದಲ್ಲಿ ನಿರ್ವಸಿತರಾದವರ ಮತ್ತು ಮಾನಸಿಕ ಸ್ವಾಸ್ಥ್ಯವನ್ನು ಕಳೆದುಕೊಂಡವರಲ್ಲಿ ಚೈತನ್ಯವನ್ನು ತುಂಬಿ ಅವರು ಹೊಸ ಜೀವನವನ್ನು ಆರಂಭಿಸಲು ಪ್ರಾಮಾಣಿಕ ಪ್ರಯತ್ನವನ್ನು ಸೇವಾಶ್ರಮದಲ್ಲಿ ಮಾಡಲಾಗುತ್ತಿದೆ. ಸೇವಾ ಮನೋಭಾವದ ದಾನಿಗಳ ಸಹಕಾರದಿಂದ ಈ ಕಾರ್ಯ ಸಾಧ್ಯವಾಗಿದೆ ಎಂದು ದೈಗೋಳಿ ಸಾಯಿನಿಕೇತನ ಸೇವಾ ಆಶ್ರಮದ ಟ್ರಸ್ಟಿ ಡಾ. ಉದಯ ಕುಮಾರ್ ಹೇಳಿದರು.
ಅವರು ಬಂಟ್ವಾಳ ಮೆಲ್ಕಾರ್ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ಕೇಂದ್ರ ಸಮಿತಿಯ ಸಭೆಯನ್ನು ಉದ್ಘಾಟಿಸಿ ಸೇವಾ ಚಟುವಟಿಕೆಗಳ ಮಾಹಿತಿ ನೀಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷ ಕಯ್ಯೂರು ನಾರಾಯಣ ಭಟ್ ಮಾತನಾಡಿ ,ಪರೋಪಕಾರ ಮತ್ತು ಸೇವೆಯ ನಿಜಾರ್ಥವನ್ನು ತಿಳಿದು ಸೇವಾಶ್ರಮಕ್ಕೆ ಸರ್ವ ರೀತಿಯ ನೆರವನ್ನು ನೀಡಬೇಕಾಗಿರುವುದು ನಮ್ಮ ಕರ್ತವ್ಯವೆಂದು ತಿಳಿಸಿ, ಪ್ರತಿಷ್ಠಾನದ ಮುಂದಿನ ಕಾರ್ಯ ಯೋಜನೆಗಳ ಮಾಹಿತಿ ನೀಡಿದರು.
ಪ್ರೊ.ವೇದವ್ಯಾಸ ರಾಮಕುಂಜ ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು. ಉದಯ ಶಂಕರ ರೈ ಪುಣಚ ಡಾ. ಉದಯಕುಮಾರರನ್ನು ಗೌರವಿಸಿದರು. ಡಾ.ಬಿ.ಎನ್ ಮಹಾಲಿಂಗ ಭಟ್, ಬಾಲಕೃಷ್ಣ ನಾಯಕ್ ಕೋಕಳ, ರವಿ ಶ್ರೀನಿವಾಸ, ಪಿ ರಾಮಚಂದ್ರ ಭಟ್, ಸೀತಾರಾಮ ಪೆರ್ನಾಜೆ ಉಪಸ್ಥಿತರಿದ್ದರು.
ಪ್ರತಿಷ್ಠಾನದ ಸದಸ್ಯ ಅನಾರು ಕೃಷ್ಣ ಶರ್ಮ ಸ್ವಾಗತಿಸಿದರು. ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ನಿರೂಪಿಸಿ, ಭವಾನಿ ಶಂಕರ ಶೆಟ್ಟಿ ಪುತ್ತೂರು ವಂದಿಸಿದರು.