ಬೆಂಗಳೂರು: ವಾಲ್ಮೀಕಿ ನಿಗಮದ ಹಣ ದುರುಪಯೋಗ ಮಾಡಿರುವ ಹಗರಣದ ಬೆನ್ನಲ್ಲೇ ಇದೀಗ ಪ್ರವಾಸೋದ್ಯಮ ಇಲಾಖೆಯಲ್ಲೂ ಹಗರಣ ಮಾಡಿರುವುದು ಬೆಳಕಿಗೆ ಬಂದಿದೆ.
ಪ್ರವಾಸೋದ್ಯಮ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಬಿ. ನಾಗೇಂದ್ರ ಅವರನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದಿರುವ ಬೆನ್ನಲ್ಲೇ ಪ್ರವಾಸೋದ್ಯಮ ಇಲಾಖೆಗೆ ಸಂಬಂಧಿಸಿದ ಬ್ಯಾಂಕ್ ಖಾತೆಯಲ್ಲಿ ವಂಚನೆ ಆಗಿರುವುದು ಬೆಳಕಿಗೆ ಬಂದಿದೆ.
ಬಾಗಲಕೋಟೆ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯಲ್ಲಿ 2.47 ಕೋಟಿಗೂ ಮಿಕ್ಕಿ ವಂಚನೆಯಾಗಿದ್ದು, ಬಾಗಲಕೋಟೆ ಐಡಿಬಿಐ ಬ್ಯಾಂಕ್ ಖಾತೆಗಳ ಮೂಲಕ ಹಣ ವಿವಿಧ ಖಾತೆಗೆ ಅಕ್ರಮವಾಗಿ ವರ್ಗಾವಣೆಯಾಗಿದೆ. ಅಕ್ರಮ ಬೆಳಕಿಗೆ ಬರುತ್ತಿದಂತೆ ಜುಲೈ 11 ರಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಗೋಪಾಲ ಹಿತ್ತಲಮನಿ ಬ್ಯಾಂಕ್ ಮ್ಯಾನೇಜರ್ ಹಾಗೂ ಸಿಬ್ಬಂದಿ ವಿರುದ್ಧ ಬಾಗಲಕೋಟೆ ಸಿಇಎನ್ ಠಾಣೆಯಲ್ಲಿ ದೂರು ನೀಡಿದ್ದು ಪೊಲೀಸರು ಅಕ್ರಮ ವ್ಯವಹಾರಗಳ ಬಗ್ಗೆ ತನಿಖೆ ಆರಂಭಿಸಿದ್ದಾರೆ.
ಜಿಲ್ಲಾ ಪ್ರವಾಸೋದ್ಯಮ ಇಲಾಖೆಗೆ ಸಂಬಂಧಿಸಿದಂತೆ ಒಟ್ಟು ಮೂರು ಖಾತೆಗಳನ್ನು ಬಾಗಲಕೋಟೆ ಐಡಿಬಿಐ ಬ್ಯಾಂಕ್‌ನಲ್ಲಿ ನಿರ್ವಹಣೆ ಮಾಡಲಾಗುತ್ತಿದ್ದು, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಅಧ್ಯಕ್ಷರ ಹೆಸರಲ್ಲಿ ಐಡಿಬಿಐ ಬ್ಯಾಂಕ್ ನಲ್ಲಿ ಖಾತೆ ತೆರೆಯಲಾಗಿದೆ. ಮೂರು ಬ್ಯಾಂಕ್ ಖಾತೆಯಿಂದ ಕಳೆದ ಅಕ್ಟೋಬರ್ 28 ರಿಂದ ಈ ಫೆಬ್ರವರಿ 22 ರವರೆಗೆ ವಿವಿಧ ಖಾತೆಗಳಿಗೆ ಹಣ ವರ್ಗಾವಣೆಯಾಗಿದೆ. ವಾಸೋದ್ಯಮ ಇಲಾಖೆ ಅನುಮತಿಯಿಲ್ಲದೆ, ಅಧಿಕಾರಿಗಳಿಗೆ ಗೊತ್ತಿಲ್ಲದಂತೆ ಇಲಾಖೆಗೆ ಸಂಬಂಧಿಸಿದ ಹಣವನ್ನು ಆರೋಪಿಗಳು ತಮಗೆ ಬೇಕಾದ ರೀತಿಯಲ್ಲಿ ವರ್ಗಾವಣೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.