ವಿಟ್ಲ: ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ 10ನೇ ಶಾಖೆ ವಿಟ್ಲ ಎಂಪೈರ್ ಮಹಲ್‍ನಲ್ಲಿ ಶನಿವಾರ ಶುಭಾರಂಭಗೊಂಡಿತು.
ಶ್ರೀ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಪರಮಪೂಜ್ಯ ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿಯವರು ದೀಪ ಪ್ರಜ್ವಲನೆ ಮಾಡಿ, ಆಶೀರ್ವಚನ ನೀಡಿ, ಒಬ್ಬರಿಗೊಬ್ಬರು ಪರಸ್ಪರ ನಂಬಿಕೆ, ವಿಶ್ವಾಸದಿಂದ ಬಂಡವಾಳ ಹಾಕಿ ವ್ಯಾಪಾರ ಶುರು ಮಾಡಿದ್ದೀರಿ. ಹಣ ದ್ರವದ ರೂಪದಲ್ಲಿ ಹರಿಯಬೇಕು. ಹಣ ಮತ್ತು ರಕ್ತ ಸ್ಟ್ರಕ್ ಆಗಬಾರದು.. ಮಕ್ಕಳಿಗೆ ಆಸ್ತಿ ಮಾಡುವುದನ್ನು ಬಿಟ್ಟು ಮಕ್ಕಳನ್ನು ಸಮಾಜದ ಆಸ್ತಿಗಳನ್ನಾಗಿ ಮಾಡಿ ಎಂದ ಸ್ವಾಮೀಜಿಯವರು, ಯಾವುದೇ ಒಂದು ಕಾರ್ಯಕ್ರಮ ಆಯೋಜನೆ ಮಾಡಬೇಕಾದರೆ ನಾವು ನಿಮಿತ್ತ ಮಾತ್ರ. ಇದು ಭಗವಂತನ ಅನುಗ್ರಹದಿಂದ ನಡೆಯುವಂತದ್ದು. ಇಂದು ಉದ್ಘಾಟನೆಗೊಂಡ ಸಂಘ ದೀನ ದಲಿತರಿಗೆ, ಬಡವರಿಗೆ ಆರ್ಥಿಕ ನೆರವು ನೀಡುವ ನಿಟ್ಟಿನಲ್ಲಿ ಬೆಳೆಯಲಿ ಎಂದು ಶುಭ ಹಾರೈಸಿದರು.
ಸಂಘ ವಿಸ್ತೃತವಾಗಿ ಬೆಳೆದಿರುವುದು ನೋಡಿದರೆ ದೇಶದ ಆರ್ಥಿಕ ಬೆಳವಣಿಗೆಗೆ ಸಮನಾಗಿದೆ : ಡಿ.ವಿ.ಸದಾನಂದ ಗೌಡ
ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಮಾತನಾಡಿ, 2002 ರಲ್ಲಿ ಪುತ್ತೂರಿನಲ್ಲಿ ಆರಂಭವಾದ ಸಂಘ ಇಷ್ಟು ವಿಸ್ತೃತವಾಗಿ ಬೆಳೆದಿರುವುದನ್ನುಅವಲೋಕಿಸಿದರೆ ದೇಶದ ಆರ್ಥಿಕ ವ್ಯವಸ್ಥೆಯ ಬೆಳವಣಿಗೆ ಹಿನ್ನಲೆಯಲ್ಲಿ ಸಮಾನಾಗಿದೆ. ಸುಮಾರು 540 ಕೋಟಿ ವ್ಯವಹಾರ ಮಾಡಿರುವ ಸಂಘ ಹೇಗೆ ಪ್ರಾಮಾಣಿಕವಾಗಿ ಯಶಸ್ಸಿಗೆ ಕಾರಣವಾಗಿದೆ ಎಂಬುದಕ್ಕೆ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಉದಾಹರಣೆಯಾಗಿದೆ. ಎಲ್ಲಾ ಸಮುದಾಯಕ್ಕೆ ಮಾರ್ಗದರ್ಶನ ಸೂತ್ರ ನೀಡುವ ಮೂಲಕ ಬೆಳೆದಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಶಾಖೆಗಳನ್ನು ತೆರೆಯುವಂತಾಗಲಿ ಎಂದು ಶುಭ ಹಾರೈಸಿದರು.
ಇತರ ಸಮುದಾಯ ಬೆಳೆಯುವ ಶ್ರೇಯೋಭಿವೃದ್ಧಿಯನ್ನು ಸಂಘ ಹೊಂದಿದೆ : ಸಂಜೀವ ಮಠಂದೂರು
ಮುಖ್ಯ ಅತಿಥಿಯಾಗಿ ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಪುತ್ತೂರು ಸಹಕಾರಿ ಕ್ಷೇತ್ರದ ತವರೂರು, ಕಾಶಿ. ಸಹಕಾರಿ ಸಂಘ, ವಿಚಾರಧಾರೆ, ತತ್ವಗಳಿಗೆ ದೊಡ್ಡ ಕೊಡುಗೆ ನೀಡಿದ ತಾಲೂಕಿದ್ದರೆ ಅದು ಪುತ್ತೂರು ತಾಲೂಕು. ಪುತ್ತೂರನ್ನು ಕೇಂದ್ರವಾಗಿಟ್ಟ ಸಹಕಾರಿ ಸಂಘ ಇಂದು ರಾಜ್ಯಕ್ಕೆ ಕಾಲಿಟ್ಟಿದೆ. ಈ ನಿಟ್ಟಿನಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರನ ಅಂಗಣದಿಂದ ಆರಂಭವಾದ ಒಕ್ಕಲಿಹ ಸಮುದಾಯ ಪತ್ತಿನ ಸಹಕಾರ ಸಂಘ ವಿಟ್ಲ ಶ್ರೀ ಪಂಚಲಿಂಗೇಶ್ವರನ ಅಂಗಣದಲ್ಲಿ ತನ್ನ 11ನೇ ಶಾಖೆ ತೆರೆಯುವ ಮೂಲಕ ಶುಭಾರಂಭಗೊಂಡಿದೆ. ತನ್ನ ಸಮುದಾಯದ ಜತೆಗೆ ಇತರ ಸಮುದಾಯ ಬೆಳೆಯುವ ಶ್ರೇಯೋಭಿವೃದ್ಧಿಯನ್ನು ಸಂಘ ಹೊಂದಿದೆ ಎಂದರು.
ಸಂಘ ಸತತ 8 ವರ್ಷಗಳಿಂದ ಆಡಿಟ್ ವರದಿಯಲ್ಲಿ ‘ಎ’ ಗ್ರೇಡ್ ಪಡೆದುಕೊಂಡಿದೆ : ಚಿದಾನಂದ ಬೈಲಾಡಿ
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ, 600 ಸದಸ್ಯರನ್ನು ಮೂರು ಲಕ್ಷದ ಮೇಲೆ ಠೇವಣಿ ಸಂಗ್ರಹಿಸಿ ಎಸ್‍ಎಂಟಿ ಶಾಖೆ ಉದ್ಘಾಟನೆಗೊಂಡಿದೆ. ನಾನು ಜವಾಬ್ದಾರಿ ತೆಗೆದುಕೊಂಡ ಮೇಲೆ 2020 ರಲ್ಲಿ ಆಲಂಕಾರು ಶಾಖೆ ತೆರೆದ ಮೇಲೆ ಮುಂದೆ ನಿರಂತರವಾಗಿ ಶಾಖೆ ತೆರೆಯಲಾಗಿದೆ. ಪ್ರಸ್ತುತ ಸಂಘ 8 ಸಾವಿರ ಸದಸ್ಯರನ್ನು ಹೊಂದಿದ್ದು, 542 ಕೋಟಿ ವ್ಯವಹಾರ ಮಾಡಿದೆ. 103 ಕೋಟಿ ಠೇವಣಿ ಸಂಗ್ರಹಿಸಿದ್ದು, 99 ಕೋಟಿ ವಾಹನ ಸಾಲ ನೀಡಿದೆ. 99.12 ವಸೂಲಾತಿ ಮಾಡಿಕೊಂಡು ಒಂದೂವರೆ ಕೋಟಿಗೂ ಮಿಕ್ಕಿ ಲಾಭ ಪಡೆದುಕೊಳ್ಳುವ ವರೆಗೆ ಸಂಘ ಬೆಳೆದಿದೆ ಎಂದ ಅವರು, ಸತತವಾಗಿ 8 ವರ್ಷಗಳಿಂದ ಆಡಿಟ್ ವರದಿಯಲ್ಲಿ ‘ಎ’ ಗ್ರೇಡ್ ಪಡೆದುಕೊಂಡಿದ್ದೇವೆ ಎಂದು ಹೇಳಿದರು.
ಪಾರದರ್ಶಕ ಆಡಳಿತ ಮಂಡಳಿ, ಜವಾಬ್ದಾರಿಯುತ ಸಿಬ್ಬಂದಿಗಳಿಂದ ಸಂಘ ಬೆಳೆದಿದೆ : ಶಶಿಕುಮಾರ್ ರೈ ಬಾಲ್ಯೊಟ್ಟು
ಮುಖ್ಯ ಅತಿಥಿಯಾಗಿ ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಗೊಟ್ಟು ಮಾತನಾಡಿ, ಸಹಕಾರಿ ಕ್ಷೇತ್ರ ಪವಿತ್ರ ಕ್ಷೇತ್ರವಾಗಿದೆ. ಇದೀಗ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘ ಉತ್ತಮ ವ್ಯವಸ್ಥೆ, ಪಾರದರ್ಶಕ ಆಡಳಿತ ಮಂಡಳಿ ಹಾಗೂ ಜವಾಬ್ದಾರಿಯುತ ಸಿಬ್ಬಂದಿಗಳಿಂದ ಉತ್ತಮವಾಗಿ ಬೆಳೆದು ಬಂದಿದೆ ಎಂದರು.
ಮುಖ್ಯ ಅತಿಥಿಗಳಾಗಿ ಮಂಗಳೂರು ಸಹಕಾರ ಸಂಘಗಳ ಉಪನಿಬಂಧಕ ಹೆಚ್. ಎನ್. ರಮೇಶ್, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ ಜಯಂತ ಪಿ.ಹೆಚ್., ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ, ವಿಟ್ಲ ಎಂಪೈರ್ ಮಹಲ್ ಮ್ಹಾಲಕ ಪೀಟರ್ ಪ್ರಾನ್ಸಿಸ್ ಲಾಸ್ರಾದೋ ಶುಭ ಹಾರೈಸಿದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಯು.ಪಿ. ರಾಮಕೃಷ್ಣ, ನಿರ್ದೇಶಕರಾದ ಜಿನ್ನಪ್ಪ ಗೌಡ ಮಳುವೇಲು, ಸತೀಶ್ ಪಾಂಬಾರು, ರಾಮಕೃಷ್ಣ ಕರ್ಮಲ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ್ ಕೆ. ಉಪಸ್ಥಿತರಿದ್ದರು.